ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಕಚ್ಚಿದ ಹಾವನ್ನು ಗೋಣಿಚೀಲದಲ್ಲಿ ಹಿಡಿದು ಆಸ್ಪತ್ರೆಗೆ ತಂದಿರುವ ವಿಚಿತ್ರ ಘಟನೆ ನಡೆದಿದೆ.
ಉನ್ನಾವೋದ ಸಫಿಪುರದ ಉಮ್ಮರ್ ಅತ್ವಾ ಗ್ರಾಮದ ನರೇಂದ್ರ ಎನ್ನುವವರ ಪತ್ನಿ ಕುಸುಮಾಗೆ ಹೆಬ್ಬಾವು ಕಚ್ಚಿದ್ದು, ಕುಸುಮಾ ಜೋರಾಗಿ ಕೂಗಿಕೊಂಡು ಪ್ರಜ್ಞೆ ತಪ್ಪಿದ್ದಾರೆ.
ತಕ್ಷಣವೇ ಕುಸುಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಈ ಘಟನೆ ವೇಳೆ ಮನೆಯಲ್ಲಿರಲಿಲ್ಲ, ಆತನಿಗೆ ವಿಷಯ ತಿಳಿದ ತಕ್ಷಣ ಪತ್ನಿಯನ್ನು ನೋಡೋಕೆ ಹೋಗದೇ ಹೆಬ್ಬಾವನ್ನು ಹಿಡಿದು ಆಸ್ಪತ್ರೆಗೆ ತಂದಿದ್ದಾರೆ.
ವೈದ್ಯರ ಬಳಿ ಬಂದು, ಗೋಣಿಚೀಲ ತೆಗೆದು ಹಾವನ್ನು ತೋರಿಸಿದ್ದಾರೆ. ಈ ವೇಳೆ ಎಮರ್ಜೆನ್ಸಿ ವಾರ್ಡ್‌ನಲ್ಲಿದ್ದ ಜನರೆಲ್ಲಾ ಗಾಬರಿಯಾಗಿದ್ದಾರೆ. ಹಾವನ್ನು ಈ ರೀತಿ ಆಸ್ಪತ್ರೆಗೆ ತರಬಾರದು ಎಂದು ಜನ ಕೂಗಿದ್ದಾರೆ. ಈ ವೇಳೆ ನನ್ನ ಪತ್ನಿಗೆ ಇದೇ ಹಾವು ಕಚ್ಚಿರೋದು, ಹಾವು ಯಾವುದು ಎಂದು ಗೊತ್ತಾದರೆ ಅವಳ ಜೀವ ಉಳಿಸೋಕೆ ಸಹಾಯ ಆಗಬಹುದು ಎಂದು ಇದನ್ನು ಹೊತ್ತು ತಂದೆ ಎಂದು ನರೇಂದ್ರ ಹೇಳಿದ್ದಾರೆ.
ಕುಸುಮಾ ಅಪಾಯದಿಂದ ಪಾರಾಗಿದ್ದು, ಹಾವನ್ನು ಕಾಡಿನಲ್ಲಿ ಬಿಟ್ಟುಬರುವಂತೆ ವೈದ್ಯರು ಹೇಳಿದ್ದು, ನರೇಂದ್ರ ಹಾಗೇ ಮಾಡಿದ್ದಾರೆ. ನರೇಂದ್ರ ಅವರ ಮುಗ್ಧತೆಗೆ ಅಯ್ಯೋ ಪಾಪಾ ಎಂದಿದ್ದೂ ಹೌದು, ಹಾಗೇ ಎಲ್ಲರೂ ಭಯಬಿದ್ದಿದ್ದೂ ಹೌದು!