ಹೊಸದಿಗಂತ ವರದಿ ಬೆಳಗಾವಿ:
ಕಟ್ಟಿಕೊಂಡ ಹೆಂಡತಿಗೇನೆ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪೀಡಕನೋರ್ವ ಹಿಂಡಲಗಾ ಜೈಲು ಸೇರಿದ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಇದೂ ಒಂದು ಸೇರ್ಪಡೆಯಾಗಿದ್ದು, ಎರಡನೇ ಮದುವೆ ಮಾಡಿಕೊಳ್ಳಲು ತಾಳಿ ಕಟ್ಟಿದ ಪತ್ನಿಗೆ ಕಿರುಕಳ ನೀಡಿದ ಘಟನೆ ಇದಾಗಿದೆ.
ನಗರದ ನಿವಾಸಿ ಕಿರಣ್ ಪಾಟೀಲ ಎಂಬಾತನೇ ಕಿರಿಕ್ ಮಾಡಿದ್ದು, ಪೊಲೀಸರು ಬಂಧಿಸಲು ಯತ್ನಿಸಿದಾಗ ಆತ್ಮಹತ್ಯೆಗೆ ಮುಂದಾಗಿದ್ದ.ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಇದೀಗ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ನಡೆದದ್ದಿಷ್ಟು…
ಹೆಂಡತಿಯ ಕೆಲ ಖಾಸಗಿ ಫೋಟೋ ಮತ್ತು ವಿಡಿಯೋ ಗಳನ್ನು ಇಟ್ಟುಕೊಂಡಿದ್ದ ಈ ಪಾಪಿ ಪತಿ ಕಿರಣ್, ದಿನ ಬೆಳಗಾದರೆ ತನಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ವಿಡಿಯೋ ಫೋಟೋ ಗಳನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
ಈ ಬಗ್ಗೆ ಸಾಕಷ್ಟು ಬುದ್ದಿ ಹೇಳಿದರೂ, ಪರಿ ಪರಿಯಾಗಿ ಬೇಡಿಕೊಂಡರು ಕೇಳದಿದ್ದಾಗ ಕೊನೆಗೆ ನೊಂದ ಮಹಿಳೆ ಪೊಲೀಸ್ ಠಾಣೆ ಏರಿ ಗಂಡನನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾಳೆ.
ದೂರಿನಲ್ಲಿ ತಿಳಿಸಿದಂತೆ ಪೊಲೀಸರು ಆತನ ಮೊಬೈಲ್ ಪರಿಶೀಲನೆ ನಡೆಸಿದ್ದು, ಆತ ಬ್ಲ್ಯಾಕ್ ಕ್ ಮೇಲ್ ಮಾಡಿದ್ದು ಕಂಡು ಬಂದಿದೆ ಎಂದು ಹೇಳಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅವನನ್ನು ವಿಚಾರಿಸಲು ಹೋದಾಗ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಆಸ್ಪತ್ರೆ ದಾಖಲು ಮಾಡಲಾಗಿತ್ತು. ನಂತರ ಚೇತರಿಸಿಕೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.