ಹೊಸದಿಗಂತ ವರದಿ ಮಡಿಕೇರಿ :
ಕೊಡಗಿನ ಜನ ಹಿಂದಿನಿಂದಲೂ ಪ್ರಕೃತಿಯನ್ನು ಆರಾಧಿಸಿಕೊಂಡು ಬರುತ್ತಿರುವವರು. ನಮ್ಮ ಆಚರಣೆಯನ್ನು ಹೊರಗಿನ ಮಂದಿ ಈ ಮೊದಲೆಲ್ಲ ಲೇವಡಿ ಮಾಡುತ್ತಿದ್ದರು. ಆದರೆ ಈಗ ಪ್ರಕೃತಿಯ ಆರಾಧನೆಯ ಮಹತ್ವ ಎಲ್ಲರಿಗೂ ಅರಿವಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಜೀವ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಔಷಧಿ ಸಸ್ಯ ಸಂಪತ್ತಿನ ಕುರಿತು ಮಡಿಕೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಮೊದಲೆಲ್ಲ ನಮ್ಮವರು ನೈಸರ್ಗಿಕ ಆಹಾರವನ್ನು ಸೇವಿಸುತ್ತಿದ್ದರು. ಹೀಗಾಗಿ ಅಂದಿನ ಮಕ್ಕಳು ಗಟ್ಟಿಮುಟ್ಟಾಗಿ ಬೆಳೆಯುತ್ತಿದ್ದರು. ಈಗ ಕೃತಕ ಆಹಾರ ಸೇವನೆಯಿಂದಾಗಿ ಅಸಹಜ ಬೆಳವಣಿಗೆ ಕಾಣಬಹುದು. ನಮ್ಮ ಆರೋಗ್ಯ ಉತ್ತಮವಾಗಿರಲು ಸಾವಯವದತ್ತ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಕರೆ ನೀಡಿದರು.
ಆಯುರ್ವೇದ ಔಷಧಿ ಬಳಸಿದರೆ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಔಷಧೀಯ ಸಸ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ಕೊಡಗಿನಲ್ಲಿ ಔಷಧೀಯ ಸಸ್ಯಗಳ ಪಾರ್ಕ್ ನಿರ್ಮಾಣಕ್ಕೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕೆಂದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ. ಸುದರ್ಶನ್ ಮಾತನಾಡಿ, ಭಾರತೀಯರು ಆಯುರ್ವೇದಿಂದ ಅಲೋಪತಿ ಕಡೆ ಹೋಗಿದ್ದೇವೆ. ವಿದೇಶಿಗರು ನಮ್ಮ ಆಯುರ್ವೇದದ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಔಷಧೀಯ ಸಸ್ಯಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ನಮಗೆ ನಮ್ಮ ಸುತ್ತಮುತ್ತ ತೋಟ, ಕಾಡುಗಳಲ್ಲಿ ಕಾಣ ಸಿಗುವ ಗಿಡಗಳ ಅನುಕೂಲದ ಬಗ್ಗೆ ತಿಳಿದಿಲ್ಲ. ಔಷಧಿ ಸಸ್ಯಗಳ ಪಾರ್ಕ್ ನಿರ್ಮಾಣ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಿ ಆದಷ್ಟು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದೆಂದರು.
ಔಷಧಿ ಸಸ್ಯಗಳ ಸಲಹೆಗಾರ ಡಾ.ಎಂ.ಜೆ. ಪ್ರಭು ಸಭಾ ನಡಾವಳಿ ಮಂಡಿಸಿದರು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಎಸ್. ಅರೇಕಲ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ. ಕುಶಾಲಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಾಮಾಜಿಕ ಅರಣ್ಯ ವಿಭಾಗದ ಪೂರ್ಣಿಮಾ ವೇದಿಕೆಯಲ್ಲಿದ್ದರು. ಕೆ.ಆರ್. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.