ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ರಕ್ಷಣಾ ಪಡೆ (ಭಾರತೀಯ ಕೋಸ್ಟ್ ಗಾರ್ಡ್) ಯು ದೇಶೀಯವಾಗಿ ನಿರ್ಮಾಣಗೊಂಡಿರುವ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಹೆಚ್) ಧ್ರುವ್ ಮಾರ್ಕ್ III ನ ಮೂರನೇ ಸ್ಕ್ವಾಡ್ರನ್ ಅನ್ನು ಕಾರ್ಯಾರಂಭ ಮಾಡಿದೆ. ಗುಜರಾತ್ ನ ಪೋರಬಂದರಿನಲ್ಲಿ ಐಸಿಜಿ ಮಹಾನಿರ್ದೇಶಕ ವಿಎಸ್ ಪಠಾನಿಯಾ ಅವರು ಹೆಲಿಕಾಪ್ಟರ್‌ಗಳನ್ನು ನಿಯೋಜನೆ ಮಾಡಿದ್ದಾರೆ.
ಈ ಹಿಂದೆ ಮೇ ತಿಂಗಳಲ್ಲಿ ಕೋಸ್ಟ್ ಗಾರ್ಡ್ ತನ್ನ ಎರಡನೇ ALH ಧ್ರುವ್ ಮಾರ್ಕ್ III ಸ್ಕ್ವಾಡ್ರನ್ ಅನ್ನು ಕೇರಳದಲ್ಲಿ ನಿಯೋಜಿಸಿತು. ಈ ಪೈಕಿ ನಾಲ್ಕು ಹೆಲಿಕಾಪ್ಟರ್‌ಗಳನ್ನು ದಕ್ಷಿಣ ರಾಜ್ಯದ ಕೊಚ್ಚಿಯಲ್ಲಿ ಇರಿಸಲಾಗಿದೆ. ಇವು ಕರ್ನಾಟಕ ಮತ್ತು ಕೇರಳದ ಕರಾವಳಿಗಳು ಮತ್ತು ಲಕ್ಷದ್ವೀಪ ದ್ವೀಪದ ಕಡಲ ತೀರಗಳ ಕಣ್ಗಾವಲಿಗೆ ಬಳಕೆಯಾಗಲಿವೆ.
ಏನಿದು ALH ಧ್ರುವ್ ಮಾರ್ಕ್ III ಹೆಲಿಕಾಪ್ಟರ್ ? :
ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಹೆಚ್) ಧ್ರುವ್ ಮಾರ್ಕ್ III ಎಂಬುದು ದೇಶೀಯವಾಗಿ ನಿರ್ಮಾಣಗೊಂಡಿರುವ ರಕ್ಷಣಾ ಹೆಲಿಕಾಪ್ಟರ್ ಆಗಿದ್ದು ಕಣ್ಗಾಗವಲು ಮತ್ತು ಆಕ್ರಮಣಕಾರಿ (ಅಟ್ಯಾಕ್) ಎರಡೂ ಪಾತ್ರವನ್ನು ನಿಭಾಯಿಸಬಲ್ಲುದು. ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನ ಹೊಂದಿರುವ ಈ ಹೆಲಿಕಾಪ್ಟರನ್ನು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿರ್ಮಿಸಿದೆ.
ಪಿಟಿಐ ಮಾಹಿತಿ ಪ್ರಕಾರ ಇದು 12.7 ಎಂಎಂ ಹೆವಿ ಮೆಷಿನ್ ಗನ್‌ಗಳನ್ನು ಹೊಂದಿದ್ದು 1,800 ಮೀಟರ್‌ಗಳ ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಅವಳಿ ಎಂಜಿನ್ ಹೊಂದಿರುವ ಮಲ್ಟೀರೋಲ್ (ಬಹುಪಾತ್ರ) ಹೊಂದಿರುವ ಹೊಸ ಪೀಳಿಗೆಯ ಹೆಲಿಕಾಪ್ಟರ್ ಇದಾಗಿದೆ.