‘ಮನೆ ಮನೆಗೆ ಪೊಲೀಸ್’ ವಿನೂತನ ಕಾರ್ಯಕ್ರಮಕ್ಕೆ ಇಂದು ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜನಸ್ನೇಹಿ ಪೊಲೀಸ್​​ ವ್ಯವಸ್ಥೆಯನ್ನು ಬಲಪಡಿಸಿ ಪರಿಣಾಮಕಾರಿಯಾಗಿಸಲು ರಾಜ್ಯ ಪೊಲೀಸ್ ಇಲಾಖೆಯು ಮನೆ-ಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಸಿ.ಲೇಔಟ್​ನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಇಂದು ಚಾಲನೆ ನೀಡಲಿದ್ಧಾರೆ.

ಅಪರಾಧ ನಿಯಂತ್ರಣದ ಜೊತೆಗೆ ನಾಗರೀಕರಲ್ಲಿ ಸುರಕ್ಷತೆ ಭಾವನೆ ಮೂಡಿಸುವುದೇ ಕಾರ್ಯಕ್ರಮ ಆಶಯವಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗಿರುವ ಪೊಲೀಸ್​ ಗಸ್ತು ಪ್ರಕ್ರಿಯೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನೂತನ ಅಭಿಯಾನಕ್ಕೆ ಇನ್ನು ಮುಂದೆ ಸಕ್ರಿಯವಾಗಿ ಮನೆ-ಮನೆಗೆ ಪೊಲೀಸರು ಬಂದು ಕಾನೂನು ಪರಿಧಿಯಲ್ಲಿ ಸಾರ್ವಜನಿಕರು ದೂರುಗಳನ್ನು ಆಲಿಸಲಿದ್ದಾರೆ.

ಪ್ರತಿ ಪೊಲೀಸ್​ ಠಾಣಾ ವ್ಯಾಪ್ತಿಯ ಸರಹದ್ದನ್ನು ಬೀಟ್‌ಗಳಾಗಿ ವಿಂಗಡಿಸಿ, ಬೀಟ್‌ಗಳನ್ನು ಸಬ್‌ಬೀಟ್‌ಗಳಾಗಿ ವಿಂಗಡಿಸಿದೆ. ಸಬ್‌ಬೀಟ್‌ಗಳಲ್ಲಿ 40-50 ಮನೆಗಳನ್ನೊಳಗೊಂಡ ಒಂದು ಕ್ಲಸ್ಟರ್ ಅಥವಾ ಸಮೂಹವನ್ನಾಗಿ ರಚಿಸಲಾಗುತ್ತದೆ. ಪ್ರತಿ ಕ್ಲಸ್ಟರ್‌ಗೆ ಒಬ್ಬ ಪೊಲೀಸ್​ ಸಿಬ್ಬಂದಿಯನ್ನು ನೇಮಿಸಿ ಉಸ್ತುವಾರಿ ಅಧಿಕಾರಿಗಳಾಗಿ ಎಎಸ್‌ಐ ಮತ್ತು ಪಿಎಸ್‌ಐನ್ನು ನಿಯೋಜಿಸಲಾಗುತ್ತದೆ.

ಪ್ರತಿ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಅಥವಾ ಸಮಸ್ಯೆಯನ್ನು ಕ್ರೋಢೀಕರಿಸಿ ರಿಜಿಸ್ಟರ್‌ನಲ್ಲಿ ನಮೂದು ಮಾಡಿಕೊಳ್ಳಲಾಗುವುದು. ಅಹವಾಲುಗಳನ್ನು ತಕ್ಷಣವೇ ಬಗೆಹರಿಸಲು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮುಕ್ತವಾಗಿ ಮಹಿಳೆಯರ ಸಮಸ್ಯೆಯನ್ನು ಸ್ಥಳದಲ್ಲಿಯೇ ಆಲಿಸಲಿದ್ದಾರೆ. ಕೌಟುಂಬಿಕ ದೌರ್ಜನ್ಯ ವಿರುದ್ಧ ಜಾಗೃತಿ ಮತ್ತು ಕಾನೂನಿನ ಅರಿವು, ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ಮಾಹಿತಿ ಹಾಗೂ ಡ್ರಗ್ಸ್​ನಿಂದಾಗುವ ದುಷ್ಪರಿಣಾಮ ಬಗ್ಗೆ ಪೊಲೀಸರು ಅಭಿಯಾನದಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!