ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ದ ಜಡ್ಜ್‌ಮೆಂಟ್’ ಸಿನಿಮಾ ರಿಲೀಸ್ ಆಗಿ ಈಗಾಗಲೇ ಒಂದು ವರ್ಷ ಕಳೆದಿದೆ. ಆದರೆ ಈವರೆಗೆ ಈ ಚಿತ್ರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಿರಲಿಲ್ಲ. ಇದೀಗ ಕೊನೆಗೂ ಈ ಲೀಗಲ್ ಥ್ರಿಲ್ಲರ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎಂಬ ಸುದ್ದಿ ಬಂದಿದೆ.
2024ರ ಮೇ 24 ರಂದು ತೆರೆ ಕಂಡ ಈ ಚಿತ್ರದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಲಾಯರ್ ಗೋವಿಂದ್ ಪ್ರಸಾದ್ ಪಾತ್ರ ನಿರ್ವಹಿಸಿದ್ದು, ಇಡೀ ಕಥೆಯೇ ಈ ಪಾತ್ರದ ಸುತ್ತ ತಿರುಗುತ್ತದೆ. ಚಿತ್ರದಲ್ಲಿ ದೂದ್ ಪೇಡ ಖ್ಯಾತಿಯ ದಿಗಂತ್ ಅವರು ಪ್ರಮುಖ ಪಾತ್ರವಹಿಸಿದ್ದು, ಒಂದು ಪ್ರಾಪರ್ಟಿ ವಿಚಾರದಿಂದ ಕುತೂಹಲದ ಕಥಾ ಹಿನ್ನಲೆಯಲ್ಲಿ ಕೊಲೆ ಪ್ರಕರಣದಲ್ಲಿ ಆರೆಷ್ಟ್ ಆಗುವವರೆಗೆ ಅವರ ಪಾತ್ರ ಮುನ್ನಡೆಸುತ್ತದೆ.
ಧನ್ಯಾ ರಾಮ್‌ಕುಮಾರ್ ಮತ್ತು ಮೇಘನಾ ಗಾಂವ್ಕರ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೇಘನಾ ಗಾಂವ್ಕರ್ ಅವರು ರವಿಚಂದ್ರನ್ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧನ್ಯಾ ರಾಮ್‌ಕುಮಾರ್ ಸಹ ನಾಯಕಿಯಾಗಿ ಅಭಿನಯಿಸಿದ್ದಾರೆ. ಅದೇ ರೀತಿ ಹಿರಿಯ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಅವರು ದಿಗಂತ್ ಪರವಾಗಿ ವಾದ ಮಾಡುವ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋರ್ಟ್ ರೂಮ್ ದೃಶ್ಯಗಳಲ್ಲಿ ರವಿಚಂದ್ರನ್ ಮತ್ತು ಲಕ್ಷ್ಮಿಯವರ ವಾದಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ.
ಚಿತ್ರಕ್ಕೆ ಗುರುರಾಜ್ ಕುಲಕರ್ಣಿ ನಿರ್ದೇಶನ ನೀಡಿದ್ದು, ಕಾನೂನು ಹಿನ್ನೆಲೆಯ ಥ್ರಿಲ್ಲರ್ ಕಥಾವಸ್ತುವಿನಿಂದ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪ್ರೇಕ್ಷಕರಿಗೆ ಲೀಗಲ್ ಥ್ರಿಲ್ಲರ್‌ವೊಂದು ಹೇಗಿರಬೇಕು ಎಂಬುದರ ಸ್ಪಷ್ಟ ಚಿತ್ರಣ ಈ ಸಿನಿಮಾ ನೀಡುತ್ತದೆ.
ಕ್ರೇಜಿ ಸ್ಟಾರ್ ಅಭಿಮಾನಿಗಳು ಹಾಗೂ ಕೋರ್ಟ್ ಡ್ರಾಮಾ ಇಷ್ಟಪಡುವ ಪ್ರೇಕ್ಷಕರಿಗೆ ಈ ಚಿತ್ರ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.