Friday, December 26, 2025

ಕಿಂಗ್ ಈಸ್ ಬ್ಯಾಕ್! ಆಂಧ್ರ ಬೆನ್ನಲ್ಲೇ ಗುಜರಾತ್ ಬೌಲರ್‌ಗಳ ಬೆವರಿಳಿಸಿದ ವಿರಾಟ್ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಕ್ರಿಕೆಟ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಅಬ್ಬರ ಮುಂದುವರಿದಿದೆ. ಬರೋಬ್ಬರಿ ಒಂದೂವರೆ ದಶಕದ ಬಳಿಕ ವಿಜಯ್ ಹಜಾರೆ ಟ್ರೋಫಿಗೆ ಮರಳಿರುವ ‘ಕಿಂಗ್ ಕೊಹ್ಲಿ’, ಆಂಧ್ರ ಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಬೆನ್ನಲ್ಲೇ, ಈಗ ಗುಜರಾತ್ ವಿರುದ್ಧವೂ ಸ್ಪೋಟಕ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ.

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಗುಜರಾತ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದ ವಿರಾಟ್, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋದರು. ತಂಡವು ಆರಂಭದಲ್ಲೇ ಪ್ರಿಯಾನ್ಶ್ ಆರ್ಯಾ (1) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಕೊಹ್ಲಿ, ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಸತತ ಎರಡನೇ ಶತಕದತ್ತ ದಾಪುಗಾಲಿಡುತ್ತಿದ್ದ ಕೊಹ್ಲಿ, ಅರ್ಪಿತ್ ರಾಣಾ ಜೊತೆಗೂಡಿ ಎರಡನೇ ವಿಕೆಟ್‌ಗೆ 72 ರನ್‌ಗಳ ಕಾಣಿಕೆ ನೀಡಿದರು. ಇದರಲ್ಲಿ ಕೊಹ್ಲಿ ಪಾಲು ಬರೋಬ್ಬರಿ 61 ರನ್ ಎನ್ನುವುದು ಅವರ ಬ್ಯಾಟಿಂಗ್ ವೈಖರಿಗೆ ಸಾಕ್ಷಿ. ಅಂತಿಮವಾಗಿ 61 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದ್ದಾಗ ವಿಶಾಲ್ ಜೈಸ್ವಾಲ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ವಿರಾಟ್ ಅವರ ಈ ಆಕರ್ಷಕ ಇನ್ನಿಂಗ್ಸ್ ನೆರವಿನಿಂದ ದೆಹಲಿ ತಂಡವು 43 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ್ದು, ಗುಜರಾತ್ ತಂಡಕ್ಕೆ ಸವಾಲಿನ ಮೊತ್ತ ನೀಡುವತ್ತ ಹೆಜ್ಜೆ ಹಾಕಿದೆ. ಸತತ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ವಿರಾಟ್ ಕೊಹ್ಲಿ ತಾವೇಕೆ ‘ರನ್ ಮಷೀನ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

error: Content is protected !!