ದೀಪ ಆರುವ ಮುನ್ನ ಉರಿಯುತ್ತೆ: ಶಾಸಕ ಕಾಶಪ್ಪ ವಿರುದ್ಧ ಯತ್ನಾಳ್ ಆಕ್ರೋಶ

ಹೊಸದಿಗಂತ ವರದಿ,ವಿಜಯಪುರ:

ಯಾವಾಗಲೂ ದೀಪ ಆರುವ ಮುನ್ನ ಉರಿಯುತ್ತೆ, ಹೀಗಾಗಿ ಅವನು ಉರಿಯುತ್ತಿದ್ದಾನೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಉಚ್ಚಾಟಿಸುವ ವಿಜಯಾನಂದ ಕಾಶಪ್ಪನವರ ಹೇಳಿಕೆ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಇಡಿ ಸಮಾಜ ಸ್ವಾಮೀಜಿ ಅವರ ಜೊತೆಯಲ್ಲಿದೆ. ಆ ಟ್ರಸ್ಟ್ನಲ್ಲಿ ಅವರ ಹೆಸರು ಇಲ್ಲ ಅಂದ ಮೇಲೆ ಅದರ ಮೇಲಿನ ಆಸೆಯು ಬಸವಜಯ ಮೃತ್ಯುಂಜಯ ಸ್ವಾಮಿಜಿ ಅವರಿಗೂ ಇಲ್ಲ. ನಾನು ಕೂಡ ಅದರ ಆಸೆ ಬಿಟ್ಟು ಬಿಡಿ ಅಂತಾ ಹೇಳಿದ್ದೇನೆ ಎಂದರು.

ಗದಗ ಪ್ರಭಣ್ಣಾ ಹುಣಶಿಕಟ್ಟಿ, ಧಾರವಾಡದ ಅಸೂಟಿ ಎರಡು ಕುಟುಂಬದವರು ಸಮಾಜದ ಆಸ್ತಿಯನ್ನು ಪ್ರಾವೈಟ್‌ಟ್ರಸ್ಟ್ ಮಾಡಿಕೊಂಡಿದ್ದಾರೆ. ಅವರ ಮಕ್ಕಳು, ಮೊಮ್ಮಕಳೆ ಅದರ ಟ್ರಸ್ಟ್ ಸದಸ್ಯರಿರ್ತಾರೆ. ಬೇರೆ ಸಮಾಜದ ಯಾರೊಬ್ಬರು ಸದಸ್ಯರು ಆಗುವ ಹಾಗಿಲ್ಲ. ಹೀಗಾಗಿ ಧಾರವಾಡದಲ್ಲಿ ಸಮಾಜದ ಆಸ್ತಿ ತಿಂದರೆ ನಿಮಗೆ ಒಳ್ಳೆಯದು ಆಗಲ್ಲ ಅಂತಾ ಅವರಿಗೆ ನಾನು ಬೈದಿದ್ದು. ಅದಕ್ಕೆ ಅವರು ಪೀಠದ ವಿಚಾರವನ್ನು ಕಾಶಪ್ಪನವರಗೆ ವಹಿಸಿದ್ದಾರೆ. ಹೀಗಾಗಿ ಅವನು ಅಷ್ಟೊಂದು ಮಾಡುತ್ತಿದ್ದಾನೆ. ಅವರು ಹೇಳುವುದು ಸತ್ಯ ಇದೆ, ಆ ಟ್ರಸ್ಟ್ನಲ್ಲಿ ಸ್ವಾಮಿಜಿಗಳ ಹೆಸರಿಲ್ಲ, ಸ್ವಾಮೀಜಿಯನ್ನು ಉಚ್ಚಾಟನೆ ಮಾಡಲು ಕಾಶಪ್ಪನವರ ಯಾರು ?, ಇದೇನು ರಾಜಕೀಯ ಪಕ್ಷನಾ? ಎಂದು ಹರಿಹಾಯ್ದರು.

ಬಿಜೆಪಿಗೆ ಮರಳಿ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಮೂರನೆ ಸಲ ನನ್ನನ್ನು ಉಚ್ಚಾಟಿಸಿದ್ದಾರೆ. ಅಂದರೆ ಒಟ್ಟು 18 ವರ್ಷಗಳವರೆಗೆ ನನ್ನ ಬಿಜೆಪಿಯಲ್ಲಿ ತೆಗೆದುಕೊಳ್ಳಲೇ ಬಾರದು. ಈಗ ನೋಡಿ ಎರಡು ತಿಂಗಳಲ್ಲಿ ಮತ್ತೆ ಮರಳಿ ನನ್ನನ್ನು ಪಕ್ಷಕ್ಕೆ ತೆಗೆದುಕೊಳ್ತಾರೆ. ಏನು ಮಾಡೋದು ? ಇದು ಸೂಚನೆ ಅಲ್ಲ, ಹಾಗೆ ಇದೆ, ನಮ್ಮ ಶಕ್ತಿ ಮತ್ತು ವರ್ಚಸ್ಸು ಇದ್ದರೆ ಎಲ್ಲರೂ ಕರಿತಾರೆ. ಇಲ್ಲ ಅಂದರೆ ಅಪ್ಪಾಜಿ ಅನ್ನುತ್ತ ಅವರ ಕೈ ಕಾಲು ಹಿಡಿಯಬೇಕಾಗುತ್ತೆ ಎಂದು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!