Thursday, November 13, 2025

ಕಾನೂನು ಎಲ್ಲರಿಗೂ ಒಂದೇ: ಸರ್ಕಾರಿ ಸ್ಥಳಗಳಲ್ಲಿ ನಮಾಜ್‌ಗೂ ಅನುಮತಿ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರಾಜ್ಯ ಸರ್ಕಾರವು ಖಾಸಗಿ ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳು ಸರ್ಕಾರಿ ಜಾಗ, ಮೈದಾನ, ಶಾಲೆ-ಕಾಲೇಜು ಆವರಣ ಮತ್ತು ಇತರ ಸಾರ್ವಜನಿಕ ಆಸ್ತಿಗಳನ್ನು ಯಾವುದೇ ಕಾರ್ಯಕ್ರಮಗಳಿಗೆ ಬಳಸುವುದಕ್ಕೆ ಪೂರ್ವಾನುಮತಿ ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಆದೇಶವು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಇತ್ತೀಚೆಗೆ ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಸರ್ಕಾರವು ಯಾವುದೇ ಒಂದು ಸಂಘಟನೆಯ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ಸಮಗ್ರವಾಗಿ ಎಲ್ಲಾ ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೂ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಿದೆ. ಇದು ಪರೋಕ್ಷವಾಗಿ RSS ಚಟುವಟಿಕೆಗಳನ್ನು ನಿಯಂತ್ರಿಸುವ ಕ್ರಮ ಎಂದು ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ.

ಸರ್ಕಾರದ ಈ ನಿರ್ಧಾರಕ್ಕೆ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ RSS ಅನ್ನು ಗುರಿಯಾಗಿಸಿಕೊಂಡು ಮಾಡಿದ ರಾಜಕೀಯ ಪ್ರೇರಿತ ಆದೇಶ ಎಂದು ಟೀಕಿಸಿದ್ದಾರೆ. ಈ ಸಂದರ್ಭದಲ್ಲಿ, “ಕೇವಲ RSS ಮಾತ್ರವಲ್ಲ, ಮುಸ್ಲಿಮರು ಸಹ ಸಾರ್ವಜನಿಕ ಮೈದಾನಗಳಲ್ಲಿ ನಮಾಜ್ ಮಾಡಲು ಅನುಮತಿ ಪಡೆಯುತ್ತಾರೆಯೇ?” ಎಂಬ ಪ್ರಶ್ನೆಯನ್ನು ವಿರೋಧ ಪಕ್ಷದ ನಾಯಕರು ಎತ್ತಿದ್ದಾರೆ.

ಈ ಎಲ್ಲ ಟೀಕೆ ಮತ್ತು ಪ್ರಶ್ನೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಖಡಕ್ ಉತ್ತರ ನೀಡಿದ್ದಾರೆ. “ಕಾನೂನು ಎಲ್ಲರಿಗೂ ಒಂದೇ. ಅದು ಯಾವುದೇ ಸಂಘಟನೆಯಾಗಿರಲಿ ಅಥವಾ ವ್ಯಕ್ತಿಗಳಾಗಿರಲಿ. ನಿಯಮಗಳು RSS ಗೆ ಎಷ್ಟು ಅನ್ವಯಿಸುತ್ತವೆಯೋ, ಮುಸ್ಲಿಮರಿಗೂ ಅಷ್ಟೇ ಅನ್ವಯಿಸುತ್ತವೆ. ಮುಸ್ಲಿಮರು ಸಹ ಸರ್ಕಾರಿ ಮೈದಾನದಲ್ಲಿ ನಮಾಜ್​ ಮಾಡಬೇಕಿದ್ದರೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು,” ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಆಸ್ತಿಗಳ ಸಮರ್ಪಕ ನಿರ್ವಹಣೆ, ರಕ್ಷಣೆ ಮತ್ತು ಬಳಕೆಯನ್ನು ಖಚಿತಪಡಿಸುವುದು ಈ ಆದೇಶದ ಮುಖ್ಯ ಉದ್ದೇಶ ಎಂದು ಸರ್ಕಾರ ಹೇಳಿದೆ. ಇನ್ನು ಮುಂದೆ ಯಾವುದೇ ಖಾಸಗಿ ಕಾರ್ಯಕ್ರಮ, ಸಭೆ ಅಥವಾ ಮೆರವಣಿಗೆಗೆ ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸರ್ಕಾರದ ಈ ಕ್ರಮವು ರಾಜ್ಯದಲ್ಲಿ ಹೊಸ ರಾಜಕೀಯ ತಿಕ್ಕಾಟಕ್ಕೆ ವೇದಿಕೆ ಕಲ್ಪಿಸಿದೆ.

error: Content is protected !!