ಹೊಸದಿಗಂತ ವರದಿ, ಮೈಸೂರು:
ಜನರಲ್ಲಿ ಭಯ, ಆತಂಕವನ್ನುoಟು ಮಾಡಿದ್ದ ಚಿರತೆಯೊಂದು ಕೋಳಿ ಫಾರ್ಮ್ನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದು ಸೆರೆಯಾದ ಘಟನೆ ಮೈಸೂರು ತಾಲೂಕಿನ ಜಯಪುರ ಹೋಬಳಿಯ ದಾರಿಪುರ ಗ್ರಾಮದಲ್ಲಿ ನಡೆದಿದೆ.
ದಾರಿಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಈ ಚಿರತೆ ಭಯ ಹುಟ್ಟಿಸಿತ್ತು. ಹಲವಾರು ದಿನಗಳಿಂದ ಈ ಭಾಗದಲ್ಲಿ ಅಡ್ಡಾಡುತ್ತ ರೈತರ, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿತ್ತು. ಅಲ್ಲದೆ ಕೋಳಿ ಫಾರಂಗೆ ನುಗ್ಗಿ ನೂರಾರು ಕೋಳಿಗಳ ಮೇಲೆ ದಾಳಿ ನಡೆಸಿ, ಕೊಂದು ತಿಂದಿತ್ತು. ಇದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಇದರಿಂದ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಬಳಿಕ ದಾರಿಪುರ ಗ್ರಾಮದ ಕೋಳಿ ಫಾರ್ಮ್ನಲ್ಲಿ ಬೋನ್ ಇಟ್ಟಿದ್ದರು. ಸಿಬ್ಬಂದಿ ಯೋಜನೆಯಂತೆ 2 ವರ್ಷದ ಹೆಣ್ಣು ಚಿರತೆ ಸದ್ಯ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರೆಲ್ಲ ನಿಟ್ಟುಸಿರು ಬಿಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು ದೂರದ ಅರಣ್ಯಕ್ಕೆ ಬಿಡಲು ಚಿರತೆಯನ್ನು ಸ್ಥಳಾಂತರಿಸಿದರು.