ಹೊಸದಿಗಂತ ವರದಿ, ಮಂಗಳೂರು:
ಸಾರಸ್ವತ ಲೋಕದ ದಿಗ್ಗಜರ ಸಮ್ಮುಖ ಹೊತ್ತಗೆ ಹೊತ್ತ ರಥ ಎಳೆಯುವ ಮೂಲಕ ಎರಡು ದಿನಗಳ ಮಂಗಳೂರು ಸಾಹಿತ್ಯ ಉತ್ಸವಕ್ಕೆ ಶನಿವಾರ ಅದ್ದೂರಿ ಶ್ರೀಕಾರವಾಯಿತು.
ಭಾರತ್ ಫೌಂಡೇಶನ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ಸಾಹಿತ್ಯ ಮಂಥನ 8 ನೇ ಆವೃತ್ತಿಯ ‘ಮಂಗಳೂರು ಲಿಟ್ ಫೆಸ್ಟ್’ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್ ಸೆಂಟರ್ ನಲ್ಲಿ ಆರಂಭಗೊಂಡಿತು.
ಸಾಹಿತ್ಯ, ಸಂಸ್ಕೃತಿ, ಕಲೆ ಕುರಿತ ವಿವಿಧ ಗೋಷ್ಠಿಗಳಲ್ಲಿ ದಿನವಿಡೀ ವಿದ್ವಾಂಸರು ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಸಭಾಂಗಣ ತುಂಬ ಕಾತರದ ಕಣ್ಣುಗಳಿಂದ ನೆರೆದಿದ್ದ ಸಾಹಿತ್ಯಾಭಿಮಾನಿಗಳು ತಮ್ಮ ಜಿಜ್ಞಾಸೆಗಳಿಗೆ ವಿದ್ವಜ್ಜನರಿಂದ ಉತ್ತರ ಪಡೆದರು. ಅತಿಥಿ ಗಣ್ಯರು ವೇದಿಕೆಗೆ ಸರಸ್ವತಿ ರಥವನ್ನು ಎಳೆದುಕೊಂಡು ಬರುವ ಮೂಲಕ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟಿಸಿದ್ದು ನೆರೆದವರ ಗಮನ ಸೆಳೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ರವಿ ಎಸ್., ಸಮಾಜವನ್ನು ರೂಪಿಸುವಲ್ಲಿ ಸಾಹಿತ್ಯದ ಮಹತ್ವದ ಪಾತ್ರವಿದೆ. ಓದು ಮತ್ತು ಚಿಂತನೆಯ ಮೂಲಕ ವ್ಯಕ್ತಿಯ ಬೌದ್ಧಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಯುವಜನರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಲಿಟ್ ಫೆಸ್ಟ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಮಂಗಳೂರು ಲಿಟ್ ಫೆಸ್ಟ್ ಮಂಗಳೂರಿನ ಜನತೆಯ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಇದು ಮಂಗಳೂರಿನ ಜನತೆಯ ಕಾರ್ಯಕ್ರಮವಾಗಿ ಮೂಡಿಬಂದಿದೆ. ಮಂಗಳೂರು ಲಿಟ್ ಫೆಸ್ಟ್ ಗೆ ದೇಶದ 18 ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಉದ್ಘಾಟನಾ ಗೋಷ್ಠಿಯಲ್ಲಿ ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ ಎಂಬ ವಿಷಯದ ಕುರಿತು ಅಜಕ್ಕಳ ಗಿರೀಶ್ ಭಟ್ ಹಾಗೂ ಶತಾವಧಾನಿ ಆರ್. ಗಣೇಶ್ ಸಂವಾದ ನಡೆಸಿದರು.
ರಾಜ್ಯಸಭಾ ಸದಸ್ಯೆ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್, ಭಾರತ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ, ಸಂಸದ ಬ್ರಿಜೇಶ್ ಚೌಟ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಡಾ. ಎಸ್.ಎಲ್. ಭೈರಪ್ಪ ಮತ್ತು ಡಾ. ಎನ್. ವಿನಯ ಹೆಗ್ಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಡಾ. ವಿದ್ಯಾ ಎಸ್. ಸ್ವಾಗತಿಸಿ, ವಂದಿಸಿದರು. ಶೈನಾ ಡಿಸೋಜ ಮತ್ತು ಆರ್‌ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.

