ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 37 ವರ್ಷದ ರಸೆಲ್, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ತಾವು ಅಂತಿಮವಾಗಿ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಪಂದ್ಯ ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ಜರುಗಲಿದ್ದು, ತಮ್ಮ ತವರು ಮೈದಾನದಲ್ಲಿಯೇ ಅಂತಿಮ ಪಂದ್ಯದ ಮೂಲಕ ವಿದಾಯ ಹೇಳಲು ಅವರು ನಿರ್ಧರಿಸಿದ್ದಾರೆ.
ಆ್ಯಂಡ್ರೆ ರಸೆಲ್ ಅವರು 2011ರಲ್ಲಿ ಪಾಕಿಸ್ತಾನ ವಿರುದ್ಧ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಪಡೆದಿದ್ದರು. ತದನಂತರ 84 ಟಿ20 ಪಂದ್ಯಗಳಲ್ಲಿ ಭಾಗವಹಿಸಿದ ಅವರು, 73 ಇನಿಂಗ್ಸ್‌ಗಳಲ್ಲಿ 1078 ರನ್ ಗಳಿಸಿದ್ದಾರೆ. ಈ ಹಿಂದೆ 3 ಅರ್ಧಶತಕಗಳನ್ನು ದಾಖಲಿಸಿರುವ ಅವರು, 61 ವಿಕೆಟ್ ಕೂಡ ಪಡೆದು ತಮ್ಮ ಬೌಲಿಂಗ್‌ನಲ್ಲಿಯೂ ಮಿಂಚಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಕೂಡ 2011ರಲ್ಲಿ ಐರ್ಲೆಂಡ್ ವಿರುದ್ಧ ಪಂದ್ಯದಿಂದ ಪ್ರವೇಶ ಪಡೆದ ರಸೆಲ್, ಕೇವಲ 56 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈ ಪಂದ್ಯಗಳಲ್ಲಿ 1034 ರನ್ ಗಳಿಸಿದ ಅವರು, 4 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಬೌಲಿಂಗ್‌ನಲ್ಲಿ ಅವರು 70 ವಿಕೆಟ್‌ಗಳನ್ನು ಪಡೆದಿದ್ದಾರೆ.
14 ವರ್ಷಗಳ ಭರ್ಜರಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಯಾಣದ ಬಳಿಕ, ರಸೆಲ್ ಇದೀಗ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಆದರೂ ಅವರು ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರವಾಗುತ್ತಿಲ್ಲ. ಐಪಿಎಲ್, ಸಿಪಿಎಲ್, ಎಂಸಿಎಲ್ ಸೇರಿದಂತೆ ಹಲವು ಖ್ಯಾತ ಟಿ20 ಲೀಗ್‌ಗಳಲ್ಲಿ ಅವರು ಮುಂದುವರೆಯಲಿದ್ದಾರೆ ಎಂದು ಘೋಷಿಸಿದ್ದಾರೆ.