ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಿದ್ಧತೆ ಜೋರಾಗಿದೆ. ಈ ನಡುವೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಖಡಕ್ ಸಂದೇಶ ನೀಡಿದ್ದಾರೆ.
ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಹಿಂದಿನ ವರ್ಷಗಳಿಗಿಂತ ಹೆಚ್ಚು ಕಷ್ಟಕರವಾಗಲಿದೆ ಎಂದು ಎಚ್ಚರಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ತಂಡ ಸಾಕಷ್ಟು ಪರಿಶ್ರಮ ಪಟ್ಟಿದ್ದು, ಈಗ ಚಾಂಪಿಯನ್ ಆಗಿರುವುದರಿಂದ ಇತರ ತಂಡಗಳು ಇನ್ನಷ್ಟು ಆಕ್ರಮಣಕಾರಿ ಆಟ ಆಡಲಿವೆ ಎಂದರು.
ಇದನ್ನೂ ಓದಿ:
ಪ್ರತಿ ಕ್ಷಣವೂ ಮಹತ್ವದ್ದಾಗಿದ್ದು, ಒಂದೂ ನಿಮಿಷ ವ್ಯರ್ಥ ಮಾಡದೇ ಪ್ರತಿಯೊಬ್ಬ ಆಟಗಾರರು ಶೇ.100ಕ್ಕಿಂತ ಹೆಚ್ಚು ಕೊಡುಗೆ ನೀಡಬೇಕು ಎಂದು ಅವರು ತಂಡವನ್ನು ಹುರಿದುಂಬಿಸಿದ್ದಾರೆ. ಮುಂದಿನ ಎರಡು ತಿಂಗಳುಗಳು ತಂಡದ ಭವಿಷ್ಯ ನಿರ್ಧರಿಸಲಿವೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಹಿಂದಿನ ಸೀಸನ್ನಲ್ಲಿ ಮೊದಲ ಬಾರಿಗೆ ಕಪ್ ಗೆದ್ದಿರುವ ಆರ್ಸಿಬಿ ಈಗ ಹೊಸ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ. ಇದೇ ಕಾರಣಕ್ಕೆ ತಂಡ ಇನ್ನಷ್ಟು ಸಿದ್ಧತೆ ಮಾಡಿಕೊಂಡಿದೆ. ಇದೇ ವೇಳೆ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹೊಸ ಆಟಗಾರರ ಸೇರ್ಪಡೆಯಿಂದ ತಂಡ ಬಲಿಷ್ಠವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



