ಕರ್ನಾಟಕದ ಮಲೆನಾಡು ಭಾಗವು ಕೇವಲ ನೈಸರ್ಗಿಕ ಸೌಂದರ್ಯಕ್ಕೆ ಮಾತ್ರವಲ್ಲ, ಪ್ರಕೃತಿಯ ಮಡಲಲ್ಲಿ ಅಡಗಿರುವ ಐತಿಹಾಸಿಕ ಮತ್ತು ಪವಾಡದ ಪುಣ್ಯಕ್ಷೇತ್ರಗಳಿಗೂ ಹೆಸರುವಾಸಿಯಾಗಿದೆ. ಅಂತಹ ಅತ್ಯಂತ ಪ್ರಮುಖ ಹಾಗೂ ನಿಗೂಢ ಶಕ್ತಿಪೀಠಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬೆ ದೇವಸ್ಥಾನವೂ ಒಂದು. ದಟ್ಟವಾದ ಅರಣ್ಯ ಮತ್ತು ಕಡಿದಾದ ಬೆಟ್ಟದ ಗುಹೆಯೊಳಗೆ ನೆಲೆಸಿರುವ ಈ ದೇವಿಯ ಪೌರಾಣಿಕ ಹಿನ್ನೆಲೆ, ನಿಗೂಢತೆ ಮತ್ತು ಪ್ರವಾಸಿಗರಿಗೆ ಅಗತ್ಯವಿರುವ ಮಾಹಿತಿ ಇಲ್ಲಿದೆ.
ಪೌರಾಣಿಕ ಹಿನ್ನೆಲೆ ಮತ್ತು ಇತಿಹಾಸ
ಚಂದ್ರಗುತ್ತಿ ಕ್ಷೇತ್ರಕ್ಕೆ ತ್ರೇತಾಯುಗದ ಭವ್ಯ ಇತಿಹಾಸವಿದೆ. ಜಗದ್ವಿಖ್ಯಾತ ಮಹರ್ಷಿ ಜಮದಗ್ನಿ ಮತ್ತು ಅವರ ಧರ್ಮಪತ್ನಿ ರೇಣುಕಾ ದೇವಿಯ ಮಗನಾದ ಭಗವಾನ್ ಪರಶುರಾಮನ ಕಾಲಕ್ಕೆ ಈ ಇತಿಹಾಸ ಸಾಗುತ್ತದೆ. ಒಮ್ಮೆ ರೇಣುಕಾ ದೇವಿಯು ನದಿಗೆ ನೀರು ತರಲು ಹೋದಾಗ, ಅಲ್ಲಿ ಗಂಧರ್ವರ ಜಲಕ್ರೀಡೆಯನ್ನು ನೋಡಿ ಮನಸ್ಸು ಚಲಿಸಿತು. ಇದರಿಂದ ಕೋಪಗೊಂಡ ಜಮದಗ್ನಿ ಮಹರ್ಷಿಗಳು ತನ್ನ ಪತ್ನಿಯ ಶಿರಚ್ಛೇದನ ಮಾಡುವಂತೆ ಮಕ್ಕಳಲ್ಲಿ ಆಜ್ಞಾಪಿಸಿದರು. ತಂದೆಯ ಮಾತಿಗೆ ಹೆದರಿ ಮೊದಲ ನಾಲ್ಕು ಮಕ್ಕಳು ನಿರಾಕರಿಸಿದಾಗ, ಕೊನೆಯ ಮಗನಾದ ಪರಶುರಾಮನು ತಂದೆಯ ಆಜ್ಞೆಯನ್ನು ಪಾಲಿಸಲು ಒಪ್ಪಿದನು.
ತಾಯಿಯ ಶಿರವನ್ನು ಕತ್ತರಿಸಲು ಪರಶುರಾಮನು ಕೊಡಲಿಯನ್ನು ಹಿಡಿದು ಬೆನ್ನಟ್ಟಿದಾಗ, ರೇಣುಕಾ ದೇವಿಯು ತನ್ನ ಪ್ರಾಣ ರಕ್ಷಣೆಗಾಗಿ ಓಡಿ ಬಂದು ಚಂದ್ರಗುತ್ತಿಯ ಈ ಕಡಿದಾದ ಬೆಟ್ಟದ ಗುಹೆಯೊಳಗೆ ಅಡಗಿಕೊಂಡಳು ಎಂಬ ಪೌರಾಣಿಕ ನಂಬಿಕೆ ಇದೆ.
ದೇವಸ್ಥಾನದ ನಿಗೂಢತೆ ಮತ್ತು ವಾಸ್ತುಶಿಲ್ಪ
ಚಂದ್ರಗುತ್ತಿ ದೇವಸ್ಥಾನವು ಸಾಮಾನ್ಯ ದೇವಸ್ಥಾನಗಳಂತೆ ಗೋಪುರ, ಪ್ರಾಕಾರಗಳನ್ನು ಹೊಂದಿಲ್ಲ. ಇದೊಂದು ಅಪರೂಪದ ನೈಸರ್ಗಿಕ ಗುಹಾಂತರ ದೇವಾಲಯವಾಗಿದೆ. ಭಾರಿ ಗಾತ್ರದ ಕಡಿದಾದ ಏಕಶಿಲಾ ಬಂಡೆಯ ಕೆಳಭಾಗದಲ್ಲಿರುವ ನೈಸರ್ಗಿಕ ಗುಹೆಯೊಳಗೆ ರೇಣುಕಾ ದೇವಿಯ ಸ್ವಯಂಭೂ ಮೂರ್ತಿ ಇದೆ. ಗರ್ಭಗುಡಿಯು ಸಂಪೂರ್ಣವಾಗಿ ಕಲ್ಲಿನ ಗುಹೆಯಾಗಿದ್ದು, ಇಲ್ಲಿ ದೇವಿಯು ನೆಲೆ ನಿಂತಿರುವುದು ಭಕ್ತರಲ್ಲಿ ರೋಮಾಂಚನ ಮೂಡಿಸುತ್ತದೆ.
ರೇಣುಕಾ ದೇವಿಯ ಗರ್ಭಗುಡಿಯ ಪಕ್ಕದಲ್ಲೇ ಮಾತಂಗಿ ದೇವಿಯ ಸಣ್ಣ ದೇವಸ್ಥಾನ ಹಾಗೂ ಬೆಟ್ಟದ ರಕ್ಷಕನಾಗಿ ಕಾಲಭೈರವನ ಮೂರ್ತಿಯೂ ಇದೆ. ಈ ಬೆಟ್ಟವು ಒಂದು ಕಾಲದಲ್ಲಿ ಕದಂಬ ರಾಜರ ಭದ್ರಕೋಟೆಯಾಗಿತ್ತು. ಬೆಟ್ಟದ ಸುತ್ತಲೂ ಕಲ್ಲಿನ ಕೋಟೆಯ ಅವಶೇಷಗಳನ್ನು ಇಂದಿಗೂ ಕಾಣಬಹುದು.
ಪ್ರಮುಖ ಉತ್ಸವಗಳು ಮತ್ತು ಹರಕೆಗಳು
ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಶ್ರೀ ರೇಣುಕಾಂಬೆ ದೇವಿಯ ವಾರ್ಷಿಕ ರಥೋತ್ಸವ ಮತ್ತು ಜಾತ್ರೆ ಅತ್ಯಂತ ಪ್ರಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶದಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಹಿಂದೆ ಈ ಕ್ಷೇತ್ರದಲ್ಲಿ ‘ನಗ್ನಪೂಜೆ’ ಎಂಬ ವಿವಾದಾತ್ಮಕ ಸಂಪ್ರದಾಯವಿತ್ತು. ಆದರೆ ಸರ್ಕಾರದ ಕಟ್ಟುನಿಟ್ಟಿನ ಆದೇಶ ಹಾಗೂ ಸಾಮಾಜಿಕ ಸುಧಾರಕರ ಹೋರಾಟದ ಫಲವಾಗಿ ಈ ಪದ್ಧತಿಯನ್ನು ಈಗ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಸ್ತುತ ಭಕ್ತರು ದೇವಿಗೆ ಉಡಿ ತುಂಬುವ ಮೂಲಕ ಪವಿತ್ರವಾಗಿ ಹರಕೆ ಸಲ್ಲಿಸುತ್ತಾರೆ.
ಪ್ರವಾಸಿಗರಿಗೆ ಗಮನಕ್ಕೆ
ಬೆಳಗ್ಗೆ 7:00 ರಿಂದ ಸಂಜೆ 6;30 ರವರೆಗೆ ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿರುತ್ತದೆ. ಶಿವಮೊಗ್ಗ ನಗರದಿಂದ ಸುಮಾರು 90 ಕಿ.ಮೀ ಮತ್ತು ಸೊರಬ ಪಟ್ಟಣದಿಂದ 16 ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ಅಥವಾ ಸಾಗರದಿಂದ ಚಂದ್ರಗುತ್ತಿಗೆ ನೇರ ಬಸ್ ಸೌಲಭ್ಯವಿದೆ. ಇನ್ನು, ಹತ್ತಿರದ ರೈಲು ನಿಲ್ದಾಣವೆಂದರೆ ಸಾಗರ ಜಂಬಗಾರು, ಇಲ್ಲಿಂದ ದೇವಸ್ಥಾನಕ್ಕೆ ಸುಮಾರು 35 ಕಿ.ಮೀ ದೂರವಿರುತ್ತದೆ.



