ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ಎಂಬಲ್ಲಿನ ಶಾಲೆಯೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ಪೊಲೀಸರು ಎಂದರೆ ಮೂಗುಮುರಿಯು, ಅವರ ಪ್ರತೀ ಕೆಲಸಗಳನ್ನು ಟೀಕಿಸುವ ಮಂದಿ ಈ ಸುದ್ದಿ ಖಂಡಿತಾ ಓದಲೇಬೇಕು…
ಇಲ್ಲಿ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ನುಗ್ಗಿ ವಿದ್ಯಾರ್ಥಿಗಳ ಪುಸ್ತಕಗಳಿಗೆ ಬೆಂಕಿ ಹಚ್ಚಿದ್ದರು. ಈ ಬೆಳವಣಿಗೆ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರು ನೇರ ಶಾಲೆಗೆ ಧಾವಿಸಿ ಬಂದಿದ್ದಾರೆ. ಬಂದ ಪೊಲೀಸರು ಇನ್ನೇನು ತನಿಖೆ ಕೈಗೆತ್ತಿಕೊಳ್ಳುತ್ತಾರೆ, ಖಡಕ್ ದನಿಯಲ್ಲಿ ವಿಚಾರಣೆ ನಡೆಸುತ್ತಾರೆ ಎಂದೆಲ್ಲಾ ಆತಂಕಗೊಂಡಿದ್ದ ಅಲ್ಲಿ ನೆರೆದಿದ್ದವರಿಗೆ ಮುಂದೆ ನಡೆದದ್ದು ಮಾತ್ರ ಶಾಕ್ ನೀಡುವಂತಹಾ ಘಟನೆ!
ವಾಹನದಲ್ಲಿ ಬಂದ ಪೊಲೀಸರು ಶಾಲೆಯ ಮುಂದೆ ತಾವು ತಂದಿದ್ದ ವಸ್ತುಗಳನ್ನು ಒಂದೊಂದಾಗಿ ಕೆಳಗಿಳಿಸಿದ್ದಾರೆ. ವಪ್ಪಾ ತನಿಖೆ ಭಯಂಕರವಾಗಿ ನಡೆಯಲಿದೆ ಎಂದು ಲೆಕ್ಕಾಚಾರ ಹಾಕಿದ್ದ ಅಲ್ಲಿದ್ದವರಿಗೆ ಮುಂದಿನ ಕ್ಷಣದಲ್ಲಿ ಅವೆಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ. ನೇರ ಪುಟಾಣಿಗಳ ಬಳಿಗೆ ತೆರಳಿದ ಖಾಕಿ ಪಡೆ ಪ್ರತಿಯೊಬ್ಬರಿಗೂ ಪುಸ್ತಕ, ಹೊಸ ಬಳಪಗಳನ್ನು ಉಡುಗೊರೆಯಾಗಿ ಹಂಚಿ ತಲೆ ನೇವರಿಸಿದ್ದಾರೆ. ಅಲ್ಲಿಯ ವರೆಗೆ ಭಯದಿಂದ ನೋಡುತ್ತಿದ್ದ ಪುಟಾಣಿಗಳಿಗೂ ಈ ಘಟನೆ ಶಾಕ್ ನೀಡಿದೆ!
ಇದೇನು ಸಾರ್ ಎಂದು ಕೇಳಿದರೆ, ತನಿಖೆಯನ್ನು ನಾವು ನಮ್ಮದೇ ರೀತಿಯಲ್ಲಿ ಮಾಡಿ ಕಿಡಿಗೇಡಿಗಳನ್ನು ಪತ್ತೆಹಚ್ಚುತ್ತೇವೆ. ಆದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುವುದು ಅಗತ್ಯ. ಕಲಿಕಾ ಸಾಮಗ್ರಿಗಳನ್ನು ಕಳೆದುಕೊಂಡ ಮಕ್ಕಳಿಗೆ ಇದು ನಮ್ಮ ಪ್ರೀತಿಯ ಕಾಣಿಕೆ. ಎಲ್ಲಾ ಶಾಲೆಯ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ ಜಿಲ್ಲಾ ಪೋಲೀಸ್ ವರಿಷ್ಠ ಪಿ.ಬಿಜೋಯ್.
ಪೊಲೀಸರ ಹೃದಯ ವೈಶಾಲ್ಯತೆಗೆ ನಮ್ಮದೂ ಒಂದು ಲೈಕ್ ಇರಲಿ, ಏನಂತೀರಾ?