ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲು ಇನ್ನು ಕೇವಲ ಒಂದು ತಿಂಗಳು ಬಾಕಿ ಇದೆ. ಮೈದಾನದಲ್ಲಿ ಟೀಂ ಇಂಡಿಯಾ ಎದುರು ಸದಾ ಮಂಡಿಯೂರುವ ಪಾಕಿಸ್ತಾನಿ ಆಟಗಾರರು, ಈಗ ಮೈದಾನದ ಹೊರಗೆ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರಲು ಹರಸಾಹಸ ಪಡುತ್ತಿದ್ದಾರೆ.
2026ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ತಂಡವು ಭಾರತಕ್ಕೆ ಬರಲು ನಿರಾಕರಿಸಿರುವ ಕಾರಣ, ಅದರ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಈ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 15 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಜರುಗಲಿದೆ.
2025ರ ಏಷ್ಯಾಕಪ್ ವಿವಾದಗಳು ಇನ್ನೂ ಹಸಿರಾಗಿರುವಾಗಲೇ, ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಭಾರತದ ವಿರುದ್ಧ ಕಿಡಿಕಾರಿದ್ದಾರೆ. “ಗಡಿಯಾಚೆಗಿನವರು (ಭಾರತ) ಆಟದ ಉತ್ಸಾಹವನ್ನು ಉಲ್ಲಂಘಿಸಿದ್ದಾರೆ. ಆದರೆ ನಾವು ಮೈದಾನದಲ್ಲಿ ಅವರಿಗೆ ಸೂಕ್ತ ಉತ್ತರ ನೀಡುತ್ತೇವೆ,” ಎಂದು ಹೇಳುವ ಮೂಲಕ ಕಿಡಿ ಹೊತ್ತಿಸಿದ್ದಾರೆ.
ವಿಶೇಷವೆಂದರೆ, ಶಾಹೀನ್ ಅಫ್ರಿದಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಗಾಯಗೊಂಡು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅವರೇ ವಿಶ್ವಕಪ್ ಆಡುವುದು ಅನುಮಾನವಿರುವಾಗ ಇಂತಹ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಅಫ್ರಿದಿ ಮಾತಿಗೆ ಗರಂ ಆಗಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು, “ಮೊದಲು ಫಿಟ್ ಆಗಿ ಮೈದಾನಕ್ಕೆ ಬನ್ನಿ, ಅಲ್ಲಿ ನಿಮ್ಮ ಆಟ ನಡೆಯಲ್ಲ” ಎಂದು ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.

