Friday, January 9, 2026

ಸಕಾಲಕ್ಕೆ ಕಂಕಣ ಭಾಗ್ಯ ಕೂಡಿಬಾರದ್ದಕ್ಕೆ ಜನ್ಮ ನೀಡಿದ ತಂದೆಯನ್ನೇ ಬಲಿಪಡೆದ ಕಿರಾತಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಕಾಲಕ್ಕೆ ಮದುವೆ ಮಾಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಮಗನೊಬ್ಬ, ಹೆತ್ತ ತಂದೆಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ.

ಅತಿಘಟ್ಟ ಗ್ರಾಮದ ಸಣ್ಣನಿಂಗಪ್ಪ (65) ಕೊಲೆಯಾದ ದುರ್ದೈವಿ. ಈತನ ಎರಡನೇ ಮಗ ನಿಂಗರಾಜ್ (36) ಕೊಲೆ ಮಾಡಿದ ಆರೋಪಿ. ಸಣ್ಣನಿಂಗಪ್ಪನಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದು, ಹಿರಿಯ ಮಗ ಮಾರುತಿ ಮತ್ತು ಮಗಳು ಜ್ಯೋತಿಗೆ ಈಗಾಗಲೇ ವಿವಾಹವಾಗಿತ್ತು. ಆದರೆ, 36 ವರ್ಷವಾದರೂ ತನಗೆ ಮದುವೆ ಮಾಡಿಲ್ಲ ಎಂಬ ಹತಾಶೆ ನಿಂಗರಾಜ್‌ನನ್ನು ಕಾಡುತ್ತಿತ್ತು. “ನನ್ನ ಜೊತೆ ಬೆಳೆದ ಸ್ನೇಹಿತರೆಲ್ಲರೂ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ, ನೀನು ಮಾತ್ರ ನನಗೆ ಮದುವೆ ಮಾಡುತ್ತಿಲ್ಲ” ಎಂದು ನಿಂಗರಾಜ್ ಪ್ರತಿದಿನ ತಂದೆಯೊಂದಿಗೆ ಜಗಳವಾಡುತ್ತಿದ್ದನು.

ಬುಧವಾರ ರಾತ್ರಿ ಸಹ ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಂದೆ-ಮಗನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಹಿರಿಯ ಮಗ ಮಾರುತಿ ಸ್ಥಳಕ್ಕೆ ಬಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ ನಿಂಗರಾಜ್ ಶಾಂತನಾಗಿರಲಿಲ್ಲ. ಎಲ್ಲರೂ ಮಲಗಿದ ನಂತರ, ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಸಿಟ್ಟಿನ ಭರದಲ್ಲಿದ್ದ ನಿಂಗರಾಜ್, ಟ್ರ್ಯಾಕ್ಟರ್‌ನಲ್ಲಿದ್ದ ಕಬ್ಬಿಣದ ರಾಡ್‌ನಿಂದ ನಿದ್ರಿಸುತ್ತಿದ್ದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ.

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸಣ್ಣನಿಂಗಪ್ಪನನ್ನು ಕುಟುಂಬಸ್ಥರು ತಕ್ಷಣ ಹೊಸದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಆರೋಪಿ ನಿಂಗರಾಜ್ ಪರಾರಿಯಾಗಿದ್ದನು. ಹಿರಿಯ ಮಗ ಮಾರುತಿ ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ. ರಮೇಶ್ ಹಾಗೂ ಪಿಎಸ್‌ಐ ಮಹೇಶ್ ಕುಮಾರ್ ಅವರ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

error: Content is protected !!