ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರದ ವಿರುದ್ಧ ರಣತಂತ್ರ ರೂಪಿಸಲು ವಿಪಕ್ಷಗಳು ಒಂದಾಗಿದ್ದು, ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಸಭೆಯನ್ನು ನಡೆಸಿವೆ. ಸಭೆಯಲ್ಲಿ ಎಡಪಕ್ಷದ ನಾಯಕ ಡಿ.ರಾಜಾ ಅವರು ಪ್ರತಿಪಕ್ಷಗಳ ಮೈತ್ರಿಯ ಹೊಸ ಹೆಸರನ್ನು ಸೂಚಿಸಿದ್ದಾರೆ. ವಿರೋಧ ಪಕ್ಷಗಳ ಮಹಾಮೈತ್ರಿಕೂಟಕ್ಕೆ ದೇಶಭಕ್ತ ಪ್ರಜಾಸತ್ತಾತ್ಮಕ ಒಕ್ಕೂಟ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಈ ಮೈತ್ರಿಕೂಟಕ್ಕೆ ಪೇಟ್ರಿಯಾಟಿಕ್ ಡೆಮಾಕ್ರಟಿಕ್ ಅಲಯನ್ಸ್ ಎಂದು ಡಿ.ರಾಜ ಸೂಚಿಸಿದ್ಧಾರೆ. ಮೂಲಗಳ ಪ್ರಕಾರ, ಈ ಹೆಸರಿನ ಬಗ್ಗೆ ಎಲ್ಲಾ ಪಕ್ಷಗಳಲ್ಲಿ ಒಮ್ಮತ ಮೂಡಿದೆ. ಶಿಮ್ಲಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಮುಂದಿನ ಸಭೆಯಲ್ಲಿ ಇದರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಬಿಹಾರದ ಪಾಟ್ನಾದಲ್ಲಿ ನಡೆದ ಸಭೆಯಲ್ಲಿ 16 ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಬಿಜೆಪಿ ವಿರುಧ್ಧ ಲೋಕಸಭಾ ಚುನಾವಣೆಯಲ್ಲಿ ಹೋರಾಟ ನಡೆಸಲು ಸಮರ್ಥ ಒಕ್ಕೂಟ ರಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸಿದ್ದರು.
ವಿರೋಧ ಪಕ್ಷಗಳ ಮುಂದಿನ ಸಭೆ ಜುಲೈ ತಿಂಗಳ ಎರಡನೇ ವಾರ ಶಿಮ್ಲಾದಲ್ಲಿ ನಡೆಯಲಿದೆ. ಬಿಜೆಪಿ ವಿರೋಧಿ ಪಕ್ಷಗಳ ಸಭೆಯಲ್ಲಿ ದೇಶಭಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಹೆಸರಿಗೆ ಅಂತಿಮ ಮುದ್ರೆ ಬೀಳಲಿದೆ.