ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಗ್ರಾಮದ ಹೆಸರು ಈಗ ವಿವಾದ ಸೃಷ್ಟಿಸಿದೆ. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಕುನ್ನತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಕಿಸ್ತಾನ ಮುಕ್ಕು ಎಂಬ ಗ್ರಾಮದ ಹೆಸರು ಈಗ ವಿವಾದಕ್ಕೆ ಕಾರಣವಾಗಿದೆ. ಗ್ರಾಮದ ಹೆಸರು ಬದಲಾಯಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.
ಕೇರಳದ ಕೊಲ್ಲಂ ಮತ್ತು ಪಟ್ಟಣಂತಿಟ್ಟ ಜಿಲ್ಲೆಗಳ ಗಡಿಯ ಬಳಿ ಇರುವ ಕುನ್ನತ್ತೂರು ಗ್ರಾಮ ಪಂಚಾಯತ್‌ನ ಒಂದು ಸಣ್ಣ ಪ್ರದೇಶ ಪಾಕಿಸ್ತಾನ ಮುಕ್ಕು. ‘ಮುಕ್ಕು’ ಎಂದರೆ ಮಲಯಾಳಂನಲ್ಲಿ ಜಂಕ್ಷನ್ ಎಂದರ್ಥ.
ಇನ್ನು ಇದಕ್ಕೆ ಪಾಕಿಸ್ತಾನ ಮುಕ್ಕು ಎಂಬ ಹೆಸರು ಬರಲು ಕಾರಣವಿದೆ. ಸುಮಾರು ಏಳು ದಶಕಗಳ ಹಿಂದೆ ಮುಸ್ಲಿಮರು ಹೆಚ್ಚಾಗಿರುವ ಈ ಪ್ರದೇಶಕ್ಕೆ ಬಂದ ಬಸ್ ನ ಚಾಲಕರೊಬ್ಬರು ಇಲ್ಲಿಗೆ ಬಂದಾಗ ಪಾಕಿಸ್ತಾನಕ್ಕೆ ಬಂದಂತೆ ಆಗುತ್ತದೆ ಎಂದು ತಮಾಷೆಗಾಗಿ ಹೇಳಿದ್ದರು. ಬಳಿಕ ಗ್ರಾಮದಲ್ಲಿ ಬಸ್ ನಿಲ್ಲುವ ಜಾಗ ಪಾಕಿಸ್ತಾನ್ ಮುಕ್ಕು ಅಂದರೆ ಪಾಕಿಸ್ತಾನ ಜಂಕ್ಷನ್ ಎಂದೇ ಕರೆಯಲ್ಪಟ್ಟಿತ್ತು. ಈ ಹೊಸ ಹೆಸರು ಎಷ್ಟು ಖ್ಯಾತಿ ಪಡೆಯಿತು ಎಂದರೆ ಅಲ್ಲಿನ ಹಳೆಯ ಹೆಸರಾದ ‘ನಿರ್ವಾತುಮುಕ್ಕು’ ಎಂಬುದು ಎಲ್ಲರಿಗೂ ಮರೆತು ಹೋಗಿತ್ತು.
ಕಳೆದ ಮೇ 21ರಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕೊಲ್ಲಂನ ಕುನ್ನತ್ತೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ‘ಪಾಕಿಸ್ತಾನ ಮುಕ್ಕು’ (ಪಾಕಿಸ್ತಾನ ಜಂಕ್ಷನ್) ಅನ್ನು ‘ಇವೆರ್ಕಲಾ ಜಂಕ್ಷನ್’ ಎಂದು ಬದಲಾಯಿಸುವ ನಿರ್ಣಯವನ್ನು ಅಂಗೀಕರಿಸಿತು. ಇದಕ್ಕೆ ಸಿಪಿಐ(ಎಂ), ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಂಚಾಯತ್ ಸದಸ್ಯರು ಒಪ್ಪಿಕೊಂಡಿದ್ದರು. ಕೇವಲ ಒಬ್ಬ ಸಿಪಿಐ(ಎಂ) ಸದಸ್ಯ ಮಾತ್ರ ವಿರೋಧ ವ್ಯಕ್ತಪಡಿಸಿದ್ದ. ಹೆಸರು ಬದಲಾವಣೆಗಾಗಿ ಔಪಚಾರಿಕ ಅರ್ಜಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ ಇದು ಪುರಸಭೆ ಮಂಡಳಿಯ ಬಳಿಗೆ ತೆರಳಿ ಬಾಕಿ ಉಳಿದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಏಪ್ರಿಲ್ ೨೨ರಂದು ನಡೆದ ಪಹಲ್ಗಾಮ್ ದಾಳಿಯ ಬಳಿಕ ಇಲ್ಲಿನ ಹೆಸರು ತೆಗೆದುಹಾಕುವಂತೆ ಒತ್ತಡಗಳು ಕೇಳಿ ಬಂದವು. ಆದರೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಗ್ರಾಮದ ರಸ್ತೆ ರಿಪೇರಿ ಆದ ಬಳಿಕ ಇದೀಗ ಇಲ್ಲಿ ಪಾಕಿಸ್ತಾನ್ ಮುಕ್ಕು ಎನ್ನುವ ನಾಮಫಲಕವನ್ನು ಅಳವಡಿಸಲಾಗಿದೆ. ಇದು ಈಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟನಿ ಜೋಸೆಫ್, ಕೇರಳದಲ್ಲಿ ಆಪರೇಷನ್ ಸಿಂದೂರ ವನ್ನು ಸಂಭ್ರಮಿಸಲಾಗುವುದಿಲ್ಲ. ಆದರೆ ಪಾಕಿಸ್ತಾನದ ಹೆಸರನ್ನು ಹೆಮ್ಮೆಯಿಂದ ಇಟ್ಟುಕೊಳ್ಳುತ್ತಾರೆ. ಈ ಹೆಸರು ಬದಲಾಯಿಸಲು ಬಿಜೆಪಿ ಪ್ರಯತ್ನ ಮಾಡಿದರೂ ಕಮ್ಯುನಿಸ್ಟ್ ಸರ್ಕಾರ ನಿರಾಕರಿಸಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಪಾಕಿಸ್ತಾನ ಮುಕ್ಕು
ತಿರುವನಂತಪುರಂನಲ್ಲಿರುವ ಕಲ್ಲಾರ ಗ್ರಾಮ ಪಂಚಾಯತ್‌ನಲ್ಲಿ ಪಾಕಿಸ್ತಾನ ಮುಕ್ಕು ಎಂಬ ಸ್ಥಳವೂ ಇದೆ. ಆದರೆ ಈ ಹೆಸರು ಬದಲಾಯಿಸಲು ಜನರಿಂದ ಯಾವುದೇ ಬೇಡಿಕೆ ಬಂದಿಲ್ಲ ಎನ್ನಲಾಗಿದೆ.