ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಯ ಆರ್ಭಟ ಮಿತಿ ಮೀರಿದ್ದು, 2020ರ ನಂತರ ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಬುಧವಾರ (ಡಿ.31) ದಾಖಲಾದ 6.4 ಡಿಗ್ರಿ ಸೆಲ್ಸಿಯಸ್ ತಾಪಮಾನವು ದೆಹಲಿಗರನ್ನು ಅಕ್ಷರಶಃ ನಡುಗುವಂತೆ ಮಾಡಿದೆ.
ಸಫದರ್‌ಜಂಗ್ ಮತ್ತು ಪಾಲಂ ಪ್ರದೇಶಗಳಲ್ಲಿ ದಟ್ಟ ಮಂಜು ಕವಿದಿದ್ದು, ಗೋಚರತೆ ಕೇವಲ 50 ಮೀಟರ್‌ಗೆ ಇಳಿಕೆಯಾಗಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಉಂಟಾಗಿರುವ ಚಕ್ರಾವರ್ತ ಮಾರುತದ ಪ್ರಭಾವದಿಂದಾಗಿ, ಇಂದು (ಜ.1) ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಜನವರಿ 3 ರಿಂದ ಶೀತಗಾಳಿ ಮತ್ತಷ್ಟು ತೀವ್ರಗೊಳ್ಳಲಿದ್ದು, ತಾಪಮಾನವು 5 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಕ್ಕೆ ಇಳಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಕೇವಲ ದೆಹಲಿಯಲ್ಲದೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾದಲ್ಲೂ ದಟ್ಟ ಮಂಜು ಆವರಿಸಿದೆ. ಇತ್ತ ಹಿಮಾಲಯದ ತಪ್ಪಲಿನಲ್ಲಿ ಸಾಧಾರಣ ಮಳೆ ಹಾಗೂ ಹಿಮಪಾತವಾಗುತ್ತಿರುವುದು ಉತ್ತರ ಭಾರತದಾದ್ಯಂತ ಶೀತಲ ಮಾರುತಗಳು ಬೀಸಲು ಕಾರಣವಾಗಿದೆ. ಮುಂದಿನ ಐದು ದಿನಗಳ ಕಾಲ ದಟ್ಟ ಮಂಜು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

