ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯ ಶುಶ್ರೂಷಕನೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಾಗಡಿ ರಸ್ತೆಯ ಚೋಳರಪಾಳ್ಯದ ನಿವಾಸಿ ಚನ್ನಬಸು ಅಶೋಕ್ (22) ಮೃತ ದುರ್ದೈವಿ. ದೀಪಾಂಜಲಿ ನಗರದ ಸಮೀಪ ರೈಲಿಗೆ ಬುಧವಾರ ರಾತ್ರಿ ಸಿಲುಕಿ ಚನ್ನಬಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಗುರುತು ಪತ್ತೆಹಚ್ಚಿದ್ದಾರೆ.
ವಿಜಯಪುರ ಜಿಲ್ಲೆ ಕಾರಜೋಳದ ಮೃತ ಅಶೋಕ್, ಕಳೆದ 15 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕನಾಗಿ ಕೆಲಸ ಮಾಡುತ್ತಿದ್ದ. ತಮ್ಮ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದ ಈತ, ಬುಧವಾರ ರಾತ್ರಿ ಕೆಲಸ ಮುಗಿಸಿ ಮರಳುವಾಗ ದೀಪಾಂಜಲಿನಗರದ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.