March 12, 2026
Thursday, March 12, 2026
spot_img

ನಿಜವಾಯ್ತು ಕೊರಗಜ್ಜನ ನುಡಿ: ಕೈಸೇರಿತು ಕಳೆದು ಹೋದ ಚಿನ್ನದ ಬಳೆ!

ಹೊಸದಿಗಂತ ವರದಿ, ಕೋಟ:

ಕಲಿಯುಗದ ಕಾರಣಿಕ ದೈವ ಎಂಬ ಆಸ್ತಿಕರ ನಂಬಿಕೆಗೆ ಪುಷ್ಟಿ ನೀಡುವ ಮತ್ತೊಂದು ಘಟನೆ ಇಲ್ಲಿನ ಪಾಂಡೇಶ್ವರದ ಕಳಿಬೈಲು ಕೊರಗಜ್ಜನ ಸನ್ನಿಧಾನದಲ್ಲಿ ನಡೆದಿದೆ. ಕಳೆದುಹೋದ ಬಂಗಾರದ ಆಭರಣ ಮತ್ತೆ ಕೈ ಸೇರಿಸುವಂತೆ ಭಕ್ತರೊಬ್ಬರ ಪ್ರಾರ್ಥನೆ ಫಲಿಸಿದ್ದು, ಈ ಸಂದರ್ಭದ ದೈವ ನುಡಿ ನಿಜವಾಗಿದೆ.

ಏನಿದು ಘಟನೆ?
ಬ್ರಹ್ಮಾವರ ನಿವಾಸಿ, ಕೋಟದ ಸರ್ಕಾರಿ ಶಾಲೆ ಶಿಕ್ಷಕಿ ಸುಮಾ ಜ.13 ರಂದು ಎಂದಿನಂತೆ ತಮ್ಮ ವಾಹನದಲ್ಲಿ ಬ್ರಹ್ಮಾವರದಿಂದ ಕೋಟಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಕೈಯಲ್ಲಿದ್ದ ಸುಮಾರು 12.5 ಗ್ರಾಂ ತೂಕದ, ಅಂದಾಜು 1.82 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ಕಳೆದುಕೊಂಡಿದ್ದರು.

ಕೋಟ ತಲುಪಿದ ನಂತರ ಈ ವಿಚಾರ ಅವರ ಗಮನಕ್ಕೆ ಬಂದಿತ್ತು. ತಕ್ಷಣ ಬಂದ ದಾರಿಯಲ್ಲಿ ಹಿಂದಿರುಗಿ ಹುಡುಕಾಟ ನಡೆಸಿದರೂ ಬಳೆ ಪತ್ತೆಯಾಗಿರಲಿಲ್ಲ. ಬಳಿಕ ಅವರು ಈ ಬಗ್ಗೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದರು.

ಕೋಟ, ಬ್ರಹ್ಮಾವರ ಪೊಲೀಸರು ಹೆದ್ದಾರಿಯ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಈ ನಡುವೆ ಭಕ್ತರಿಂದ ಕೇಳಿಬಂದ ಕೊರಗಜ್ಜನ ಪವಾಡಗಳ ಕುರಿತ ಮಾಹಿತಿ ಪಡೆದ ಸುಮಾ, ಸಾಸ್ತಾನ ಕೆಳಬೆಟ್ಟು ಮೂಡಹಡು ನೆಲೆನಿಂತ ಕಳಿಬೈಲು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಅವರು ಪ್ರಶ್ನಾ ಚಿಂತನೆ ನಡೆಸಿ ಚಿನ್ನದ ಬಗ್ಗೆ ಚಿಂತಿಸಬೇಕಾಗಿಲ್ಲ. ಅಜ್ಜನಲ್ಲಿ ನಂಬಿಕೆ ಇಡಿ. ನಿಮ್ಮ ಚಿನ್ನ ಒಬ್ಬ ವ್ಯಕ್ತಿಗೆ ಸಿಕ್ಕಿದ್ದು, ಮುಂದಿನ 80 ದಿನದೊಳಗೆ ಅದು ನಿಮ್ಮ ಕೈ ಸೇರುತ್ತದೆ ಎಂದು ಅಭಯವಚನ ನೀಡಿದ್ದರು. ಚಿನ್ನ ಮರಳಿ ಸಿಕ್ಕಿದರೆ ಸೇವೆ ಸಲ್ಲಿಸುವಂತೆ ಬೇಡಿಕೊಳ್ಳಲು ಸೂಚಿಸಿ ಪ್ರಸಾದ ನೀಡಿದ್ದರು. ಇತ್ತ ಬನ್ನಾಡಿ ನಿವಾಸಿ ಪ್ರವೀಣ್ ಎಂಬವರು ಉಡುಪಿಯಿಂದ ಕೋಟಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಅವರ ಮೊಬೈಲ್ ಫೋನ್ ಮಾಬುಕಳ ಸೇತುವೆ ಬಳಿ ಬಿದ್ದಿದ್ದು, ಅದನ್ನು ಎತ್ತಿಕೊಳ್ಳುವ ವೇಳೆ ರಸ್ತೆಬದಿಯ ಮಣ್ಣಿನಲ್ಲಿ ಬಿದ್ದಿದ್ದ ಚಿನ್ನದ ಬಳೆ ಅವರಿಗೆ ಕಂಡಿತ್ತು. ಅವರು ಅದನ್ನು ಮನೆಗೆ ಸುರಕ್ಷಿತವಾಗಿ ತೆಗೆದು ಮನೆಯಲ್ಲಿಟ್ಟಿದ್ದರು. ಬಳಿಕ ತುರ್ತು ಕೆಲಸದ ನಿಮಿತ್ತ ಅವರು ನಂತರ ಬೆಂಗಳೂರಿಗೆ ತೆರಳಿದ್ದುದರಿಂದ ಕೋಟ ಠಾಣೆಯ ಮೂಲಕ ಶಿಕ್ಷಕಿಗೆ ಚಿನ್ನವನ್ನು ಹಸ್ತಾಂತರಿಸಿದ್ದಾರೆ.

ಪಾಂಡೇಶ್ವರ ಕಳಿಬೈಲು ಕೊರಗಜ್ಜನ ಪವಾಡದಿಂದ ಕಳೆದುಹೋದ ಚಿನ್ನದ ಬಳೆ ಮತ್ತೆ ಸುಮಾ ಅವರ ಕೈ ಸೇರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !