January14, 2026
Wednesday, January 14, 2026
spot_img

ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ…ಮೋಹನ್‌ಲಾಲ್ ‘ದೃಶ್ಯಂ 3’ ರಿಲೀಸ್ ಗೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಮಲಯಾಳಂ ನಟ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇದೀಗ ರಿಲೀಸ್ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಘೋಷಿಸಿದೆ.

ಈ ಸಿನಿಮಾವನ್ನು ಏಪ್ರಿಲ್ 2ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಆದರೆ ಅಜಯ್ ದೇವಗನ್ ನಟಿಸುತ್ತಿರುವ ಇದೇ ಚಿತ್ರದ ಹಿಂದಿ ಆವೃತ್ತಿಯು ಅಕ್ಟೋಬರ್ 2ರಂದು ತೆರೆಗೆ ಬರುತ್ತಿದೆ.

ದೃಶ್ಯಂ 3 ರಿಲೀಸ್‌ ಡೇಟ್‌ ಅನ್ನು ಹಂಚಿಕೊಂಡಿರುವ ಮೋಹನ್‌ಲಾಲ್, “ವರ್ಷಗಳು ಕಳೆದಿವೆ. ಆದರೆ ಭೂತಕಾಲ ಕಳೆದಿಲ್ಲ. ದೃಶ್ಯಂ 3 ವಿಶ್ವಾದ್ಯಂತ ಏಪ್ರಿಲ್ 2ರಂದು ಬಿಡುಗಡೆ ” ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಹಂಚಿಕೊಳ್ಳಲಾದ ಸಂಕ್ಷಿಪ್ತ ಅನಿಮೇಟೆಡ್ ಪ್ರಿವ್ಯೂನಲ್ಲಿ ಕಥಾಹಂದರದ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಟ್ಟುಕೊಡದೆ ಅಭಿಮಾನಿಗಳಿಗೆ ಮುಂಬರುವ ಚಿತ್ರದ ಒಂದು ಸಣ್ಣ ಝಲಕ್ ನೀಡಲಾಗಿದೆ. “ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ” ಎಂಬ ಈ ಸಿನಿಮಾದ ಟ್ಯಾಗ್‌ಲೈನ್ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಮಧ್ಯಮ ವರ್ಗದ ವ್ಯಕ್ತಿ ಜಾರ್ಜ್‌ಕುಟ್ಟಿಯ ಸುತ್ತ ಸುತ್ತುವು ಕಥೆಯಲ್ಲಿ ಐಜಿ ಗೀತಾ ಪ್ರಭಾಕರ್ ಅವರ ಮಗ ವರುಣ್ ಪ್ರಭಾಕರ್ ನಾಪತ್ತೆಯಾಗಿರುತ್ತಾನೆ. ಆನಂತರ ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ಮೇಲೆ ಅನುಮಾನ ಬಂದು ಅವರ ಜೀವನವೇ ತಲೆಕೆಳಗಾಗುವ ಕಥೆ ಈ ಸಿನಿಮಾದಲ್ಲಿತ್ತು. ಆನಂತರ ಏನೆಲ್ಲಾ ಆಗಿದೆ ಎಂಬುದು ಮೊದಲ ಮತ್ತು ಎರಡನೇ ಪಾರ್ಟ್‌ನಲ್ಲಿ ಗೊತ್ತಾಗಿದೆ. ಪಾರ್ಟ್‌ 3ರ ಬಗ್ಗೆ ಮಾತನಾಡಿದ್ದ ನಿರ್ದೇಶಕ ಜೀತು ಜೋಸೆಫ್, “ದೃಶ್ಯಂ ಬಹಳಷ್ಟು ಜನರ ಮೇಲೆ ಪ್ರಭಾವ ಬೀರಿದ ಚಿತ್ರವಾಗಿದೆ. ಇದು ಭಾರೀ ನಿರೀಕ್ಷೆಯ ಭಾರವನ್ನು ಹೊತ್ತಿದೆ. ಪ್ರೇಕ್ಷಕರು ಯಾವುದೇ ಪೂರ್ವಗ್ರಹ ಪೀಡಿತ ನಿರೀಕ್ಷೆಗಳಿಲ್ಲದೆ ಇದನ್ನು ನೋಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ” ಎಂದು ಮನವಿ ಮಾಡಿದ್ದರು.

ಜಾರ್ಜ್‌ ಕುಟ್ಟಿಯಾಗಿ ಮೋಹನ್‌ಲಾಲ್ ಮುಂದುವರಿದಿದ್ದು, ಅವರೊಂದಿಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಮುರಳಿ ಗೋಪಿ, ಸಿದ್ದಿಕ್ ಇತರರು ನಟಿಸಿದ್ದಾರೆ. ಮುಂಬರುವ ಪಾರ್ಟ್‌ 3ರ ಬಗ್ಗೆ ಚಿತ್ರತಂಡ ಹೆಚ್ಚಿನ ವಿವರಗಳನ್ನು ಇನ್ನೂ ಹಂಚಿಕೊಂಡಿಲ್ಲವಾದರೂ, ನಿರೀಕ್ಷೆ ಮಾತ್ರ ಜೋರಾಗಿದೆ.

Most Read

error: Content is protected !!