ದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೆಲವಡೆ ಶುಕ್ರವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಆದರೆ ಜಿಲ್ಲಾಡಳಿತ ಇದನ್ನು ಅಲ್ಲಗಳೆದಿದೆ.
ಶುಕ್ರವಾರ ಬೆಳಗ್ಗೆ 6.35ರ ಸುಮಾರಿಗೆ ಕುಶಾಲನಗರದ ಜನತಾ ಕಾಲೋನಿ, ಬಸವನತ್ತೂರು, ಹೆಬ್ಬಾಲೆಯ ಹಕ್ಕೆ, ಹುಲುಸೆ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿರುವ ಬಗ್ಗೆ ಅಲ್ಲಿನ ನಿವಾಸಿಗಳು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಹರಿದಾಡಿದೆ.
ಆ ಭಾಗದಲ್ಲಿ ಬೆಚ್ಚಿಬೀಳಿಸುವ ಶಬ್ಧ ಕೇಳಿ ಬಂದಿದ್ದು, ಬಹುತೇಕ ಮಂದಿ ನಿದ್ದೆಯಲ್ಲಿದ್ದ ಕಾರಣ ಕೆಲವರಿಗಷ್ಟೇ ಇದರ ಅನುಭವವಾಗಿರುವುದಾಗಿ ಹೇಳಲಾಗಿದೆ. ಕೆಲವರು ಶಬ್ಧ ಕೇಳಿ ಬಂದಿರುವುದನ್ನು ದೃಢಪಡಿಸಿದರೆ,ಮತ್ತೆ ಕೆಲವರು ಭೂ ಕಂಪನದ ಅನುಭವವಾಗಿರುವುದಾಗಿ ಹೇಳಿದ್ದಾರೆ.
ಕುಶಾಲನಗರದಿಂದ 8 ಕಿ.ಮೀ. ಅಂತರದಲ್ಲಿ ಹಾರಂಗಿ ಜಲಾಶಯವಿದ್ದು, ಈ ಕಂಪನದ ವಿಷಯ ತಿಳಿದ ಸ್ಥಳೀಯರು ಆತಂಕಗೊಂಡಿದ್ದಾರೆ. ಈ ಕುರಿತು ಕುಶಾಲನಗರ ತಹಶೀಲ್ದಾರ್ ಅವರನ್ನು ಸಂಪರ್ಕಿಸಿದಾಗ, ಭೂಮಿ ಭೂಕಂಪಿಸಿದ ಕುರಿತು ಯಾರೊಬ್ಬರೂ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಭೂ ಕಂಪನವಾದ ಬಗ್ಗೆ ಎಲ್ಲೂ ದಾಖಲಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಅನನ್ಯ ವಾಸುದೇವ್ ಅವರು ‘ಹೊಸದಿಗಂತ’ಕ್ಕೆ ತಿಳಿಸಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಬಸವನತ್ತೂರು ಭಾಗದಲ್ಲಿ ಕಲ್ಲುಕೋರೆಗಳಿದ್ದು, ಇವುಗಳಲ್ಲಿ ಉಂಟಾಗಿರುವ ಸ್ಫೋಟದಿಂದ ಶಬ್ಧ ಕೇಳಿ ಬಂದಿರಬಹುದೆಂದು ಅಂದಾಜಿಸಲಾಗಿದೆ.