ಹೊಸ ದಿಗಂತ ವರದಿ, ಶಿವಮೊಗ್ಗ:
ವಿಮಾನ ನಿಲ್ದಾಣದಲ್ಲಿ ಕೆಲಸ ಗಿಟ್ಟಿಸಲು ಹೋಗಿ ಯುವಕನೋರ್ವ 72 ಸಾವಿರ ರೂ.ಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಸಮೀಪದ ಹೊಳಲೂರಿಬ ಯುವಕ ಹಣ ಕಳೆದುಕೊಂಡವರು. ವಿಮಾನ ನಿಲ್ದಾಣದಲ್ಲಿ ಕೆಲಸ ಗಿಟ್ಟಿಸುವ ಸಲುವಾಗಿ ಏರ್‌ಪೋರ್ಟ್ ಅಥಾರಿಟಿ ಆಲ್ ಇಂಡಿಯಾ ಅಪ್ಲಿಕೇಶನ್ ತೆರೆದು ಅದರಲ್ಲಿ ಅರ್ಜಿ ಸಲ್ಲಿಸಿದ್ದರು.
ಇತ್ತೀಚೆಗೆ ಮೋನಿಕಾ ಎಂಬ ಮಹಿಳೆ ಕರೆ ಮಾಡಿ, ತಾನು ಏರ್‌ಪೋರ್ಟ್ ಅಥಾರಿಟಿ ಆಲ್ ಇಂಡಿಯಾ ಶಿವಮೊಗ್ಗದ ಹೆಚ್‌ಆರ್ ಎಂದು ಪರಿಚಯಿಸಿಕೊಂಡಿದ್ದರು. ಜೊತೆಗೆ ನೀವು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸಿಬ್ಬಂದಿಯಾಗಿ ನೇಮಕ ಆಗಿದ್ದೀರಿ. ಅದರ ರಿಜಿಸ್ಟ್ರೇಶನ್ ಮಾಡಲು ಹಣ ತುಂಬಬೇಕಾಗುತ್ತದೆ ಎಂದು ಹಂತ ಹಂತವಾಗಿ ಫೋನ್ ಪೇ ಮೂಲಕ 72,900 ರೂ. ಪಡೆದುಕೊಂಡಿದ್ದಾರೆ. ನಂತರ ಯುವಕನಿಗೆ ಮೋಸ ಹೋಗಿರುವುದು ಗೊತ್ತಾಗಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಕಲಿ ಜಾಹೀರಾತು
ಈಗಾಗಲೇ ವಿಮಾನ ನಿಲ್ದಾಣದಲ್ಲಿ ಕೆಲಸ ಖಾಲಿ ಇರುವ ಕುರಿತು ನಕಲಿ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಂಸದ ರಾಘವೇಂದ್ರ, ವಿಮಾನ ನಿಲ್ದಾಣದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.