ಹೊಸದಿಗಂತ ವರದಿ ಬೆಳಗಾವಿ :
ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಮಹಾರಾಷ್ಟ್ರದ ಬಸ್ಸುಗಳಿಗೆ ಕಲ್ಲೆಸೆದು ಪುಂಡಾಟಿಕೆ ಮೆರೆದಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪರಶುರಾಮ್ ನಾಯ್ಕ್ (24),ಬಸವರಾಜ್ ಶಿಂದೆ(26) ಎಂಬಾತರೆ ಪೊಲೀಸರ ಅತಿಥಿಯಾಗಿದ್ದಾರೆ. ಇಬ್ಬರೂ ಗೋವಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಗುರುವಾರ ತಡರಾತ್ರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಒಂದು ಬಸ್ ಮೇಲೆ ಈ ಇಬ್ಬರು ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಈ ಘಟನೆಯಲ್ಲಿ ಓರ್ವ ಪ್ರಯಾಣಿಕರ ತಲೆಗೆ ಗಾಯವಾಗಿತ್ತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹುಕ್ಕೇರಿ ಅಗ್ನಿಶಾಮಕದಳದ ವಾಹನ ಚಾಲಕ ರಮೇಶ ಚಿವಟೆ ಎಂಬವರ ತಲೆಗೆ ಕಲ್ಲಿನಿಂದ ಗಾಯವಾಗಿತ್ತು. ಹುಕ್ಕೇರಿ ಯಿಂದ ಬೆಳಗಾವಿಗೆ ಹೊರಟಿದ್ದ ಈ ಮೂರು ಬಸ್ಸಗಳಿಗೆ ಬೆನಕನಹೊಳಿ ಗ್ರಾಮದ ಬಳಿ ಕಿಡಿಗೇಡಿಗಳು ಕಲ್ಲು ತೂರಿ ಆತಂಕ ಸೃಷ್ಟಿಸಿದ್ದರು.
ಬಸ್ ನಿಲ್ಲಿಸಿ ನೋಡಿದರೆ ಯಾರೂ ಇರಲಿಲ್ಲ. ಕಿಡಿಗೇಡಿಗಳು ಪರಾರಿಯಾಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದ ಯಮಕನಮರಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅಲ್ಲದೇ ಗುರುವಾರ ರಾತ್ರಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಅವರೂ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು.