ಹೊಸದಿಗಂತ ಡಿಜಿಟಲ್ ಡೆಸ್ಕ್
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುತ್ತಿದ್ದು, ಸ್ಫೋಟ ನಡೆಸಿದ ಹಿಂದಿನ ದಿನ ಜಿಲ್ಲೆಯ ಬೆಳ್ತಂಗಡಿಯ ಬೆಂದ್ರಾಳದಲ್ಲಿ ನಿಷೇಧಿತ ಸಾಟಲೈಟ್ ಫೋನ್ ಕರೆ ಹೋಗಿರುವುದು ಬೆಳಕಿಗೆ ಬಂದ ಬೆನ್ನಲ್ಲಿ ಧರ್ಮಸ್ಥಳ ಪೊಲೀಸರಿಂದ ಶನಿವಾರ ಬೆಂದ್ರಾಳ ಪ್ರದೇಶದಲ್ಲಿ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ .
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ನವಂಬರ್ 18 ರಂದು ಸಂಜೆ 5 ಗಂಟೆಗೆ ನಿಷೇಧಿತ ಸಾಟಲೈಟ್ ಫೋನ್ ಕರೆ ಹೋಗಿರುವ ಬಗ್ಗೆ ಕೇಂದ್ರ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು , ಅದರಂತೆ ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡಲು ಮಾಹಿತಿ ರವಾನಿಸಿದ್ದಾರೆ.
ಶುಕ್ರವಾರ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿದ್ದ ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ಪೆಕ್ಟರ್ ಚಿಂದನಂದ್ ಮತ್ತು ತಂಡ ಪರಿಶೀಲನೆ ನಡೆಸಿದ್ದರು. ಮತ್ತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ಮತ್ತು ತಂಡ ತೋಟತ್ತಾಡಿ ಗ್ರಾಮದ ಬಾರೆಮನೆ ನಿವಾಸಿಗಳಾದ ರುಕ್ಮಯ ಗೌಡ ಮನೆ ಮತ್ತು ಚೆಲುವಮ್ಮ ಮನೆಯಲ್ಲಿ ಮಾಹಿತಿ ಸಂಗ್ರಹಿಸಿ ಬೆಂದ್ರಾಳ ಸುತ್ತಮುತ್ತಲಿನ ಸುಮಾರು ಐದು ಕಿಮೀ ಅರಣ್ಯ ಪ್ರದೇಶದೊಳಗೆ ಹುಡುಕಾಟ ನಡೆಸಿ ನಂತರ ಸಾಟಲೈಟ್ ಕರೆ ಹೋದ ಸ್ಥಳವನ್ನು ಅತಣ್ಯದಲ್ಲಿ ಪತ್ತೆ ಹಚ್ವಿದ್ದು ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ.