July 2, 2026
Thursday, July 2, 2026
spot_img

ಜೈಲು ಪಾಲಾದ್ರೆ ಸಚಿವ ಸ್ಥಾನ ಖಾಲಿ! ಕೇಂದ್ರದಿಂದ ಹೊಸ ಸಂವಿಧಾನ ತಿದ್ದುಪಡಿ ಮಸೂದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಸತತ 30 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸುವ ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಸ್ವಯಂಚಾಲಿತವಾಗಿ ಅಧಿಕಾರದಿಂದ ವಜಾಗೊಳಿಸುವ ಪರಿಷ್ಕೃತ ಮಸೂದೆಯನ್ನು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.

ಜುಲೈ 17ಕ್ಕೆ ಜೆಪಿಸಿ ವರದಿ ಸಲ್ಲಿಕೆ

ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದ ವಿವಾದಾತ್ಮಕ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸದ್ಯ ಜಂಟಿ ಸಂಸದೀಯ ಸಮಿತಿ (JPC) ಪರಿಶೀಲಿಸುತ್ತಿದೆ. ಮೂಲಗಳ ಪ್ರಕಾರ, ಸಮಿತಿಯು ಜುಲೈ 17 ರಂದು ತನ್ನ ಅಂತಿಮ ವರದಿಯನ್ನು ಅಂಗೀಕರಿಸುವ ನಿರೀಕ್ಷೆಯಿದೆ.

ಈ ಪ್ರಸ್ತಾವನೆಯು ಇನ್ನೂ ಸಂಪೂರ್ಣ ಕಾನೂನಾಗಿ ಜಾರಿಯಾಗಿಲ್ಲ. ಇದು ಜಾರಿಗೆ ಬರಬೇಕಾದರೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆದು, ಅಗತ್ಯ ಸಾಂವಿಧಾನಿಕ ಬಹುಮತದೊಂದಿಗೆ ಅಂಗೀಕಾರವಾಗಬೇಕಿದೆ.

ದುರುಪಯೋಗ ತಡೆಗೆ ಕಟ್ಟುನಿಟ್ಟಿನ ಕ್ರಮ

ರಾಜಕೀಯ ದ್ವೇಷ ಸಾಧನೆಗಾಗಿ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಜೆಪಿಸಿ ಕೆಲವು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಲಿದೆ. ಆದರೆ, ಮಸೂದೆಯ ಮೂಲ ಮತ್ತು ಪ್ರಮುಖ ನಿಬಂಧನೆಗಳನ್ನು ಹಾಗೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹೊಸ ನಿಯಮದ ಮಾನದಂಡಗಳೇನು?

  • ಅರ್ಹತೆ: 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಪ್ರಕರಣ ದಾಖಲಾಗಿರಬೇಕು.
  • ಅವಧಿ: ಆರೋಪಿ ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ನಿಯಮ ಅನ್ವಯ.
  • ಕ್ರಮ: ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಸ್ವಯಂಚಾಲಿತವಾಗಿ ಅವರನ್ನು ಅಧಿಕಾರದಿಂದ ವಜಾಗೊಳಿಸುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !