February 11, 2026
Wednesday, February 11, 2026
spot_img

ಊಟ ತರೋ ನೆಪ.. ಕೀ ಕದಿಯೋ ಜಾಣ್ಮೆ! ಕಾರಿನ ಮೋಹಕ್ಕೆ ಬಿದ್ದ ಯುವಕ ಈಗ ಪೊಲೀಸ್ ಅತಿಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಸವನಗುಡಿ ಪ್ರದೇಶದಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಂಡುಕೊಂಡ ಕಾರಿನ ಮಾಸಿಕ ಕಂತು ಪಾವತಿಸಲು ಹಣವಿಲ್ಲದೇ, ತನ್ನ ಸ್ವಂತ ದೊಡ್ಡಮ್ಮ 25 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಯುವಕನೊಬ್ಬ ಕಳ್ಳತನ ಮಾಡಿ ಈಗ ಪೊಲೀಸರ ಪಾಲಾಗಿದ್ದಾನೆ.

ಉತ್ತರಹಳ್ಳಿಯ ನಿವಾಸಿ ಶರತ್ ಕುಮಾರ್ (31) ಬಂಧಿತ ಆರೋಪಿ. ಈತನ ದೊಡ್ಡಮ್ಮ ತ್ಯಾಗರಾಜನಗರದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಮನೆಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೆಲಸ ಮಾಡುತ್ತಿದ್ದರು. ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಮಾಲೀಕರು ಅವರಿಗೆ ಮನೆಯಲ್ಲೇ ವಾಸಿಸಲು ಅವಕಾಶ ನೀಡಿ, ನಂಬಿಕೆಯಿಂದ ಒಂದು ಸೆಟ್ ಬೀಗದ ಕೈಯನ್ನೂ ನೀಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಶರತ್, ಆಗಾಗ ದೊಡ್ಡಮ್ಮನಿಗೆ ಊಟ ತಂದುಕೊಡುವ ನೆಪದಲ್ಲಿ ಮನೆಗೆ ಬರುತ್ತಿದ್ದ.

ಮನೆ ಮಾಲೀಕರು ಇಲ್ಲದ ಸಮಯವನ್ನು ಹೊಂಚು ಹಾಕುತ್ತಿದ್ದ ಶರತ್, ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೊಡ್ಡಮ್ಮನಿಗೆ ತಿಳಿಯದಂತೆ ಆಕೆಯ ಬಳಿಯಿದ್ದ ಬೀಗದ ಕೈ ಪಡೆದು ಮನೆಯೊಳಗೆ ನುಗ್ಗಿದ್ದ. ಅಲ್ಲಿಂದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದ. ಮಾಲೀಕರು ದೂರು ನೀಡಿದಾಗ ಮೊದಲು ಮನೆಕೆಲಸದಾಕೆಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದರೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಅಲ್ಲಿಗೆ ಆಗಾಗ ಬರುತ್ತಿದ್ದ ಶರತ್‌ನ ಅಸಲಿ ಮುಖವಾಡ ಕಳಚಿದೆ.

ಇದನ್ನೂ ಓದಿ:

ಪೊಲೀಸರ ವಿಚಾರಣೆಯಲ್ಲಿ “ಕಾರಿನ ಇಎಂಐ ಕಟ್ಟಲು ಹಣವಿಲ್ಲದ ಕಾರಣ ಈ ಕೃತ್ಯ ಎಸಗಿದೆ” ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಪೊಲೀಸರು ಈ ಕೆಳಗಿನವುಗಳನ್ನು ವಶಪಡಿಸಿಕೊಂಡಿದ್ದಾರೆ:

241 ಗ್ರಾಂ ಚಿನ್ನದ ಆಭರಣಗಳು

2.8 ಕೆಜಿ ಬೆಳ್ಳಿ ವಸ್ತುಗಳು

1.30 ಲಕ್ಷ ರೂ. ನಗದು (ಒಟ್ಟು ಸುಮಾರು 36 ಲಕ್ಷ ರೂ. ಮೌಲ್ಯದ ಮಾಲು)

ತಾನು ನಂಬಿದ್ದ ಮಗನಂತಿದ್ದ ಅಳಿಯನೇ ಇಂತಹ ಕೆಲಸ ಮಾಡಿದ್ದಾನೆ ಎಂದು ತಿಳಿದು ದೊಡ್ಡಮ್ಮ ದಿಗ್ಭ್ರಮೆಗೊಂಡಿದ್ದಾರೆ. ಸದ್ಯ ಬಸವನಗುಡಿ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !