ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಬೇಗೆ ದಿನೇ ದಿನೆ ಹೆಚ್ಚುತ್ತಿದೆ. ಬಿಸಿಲ ಝಳ ತಾಳಲಾರದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆರ್ಟಿಫಿಶಿಯಲ್ ಸಕ್ಕರೆ ಪಾನೀಯಗಳನ್ನು ಬಿಟ್ಟು ಎಳನೀರಿನ ಕಡೆ ಜನ ಮುಖ ಮಾಡಿದ್ದಾರೆ, ಆದರೆ ಎಳನೀರಿನ ದರ ಜನರನ್ನು ಹೌಹಾರಿಸಿದೆ.
ಎಳನೀರು ವರ್ಷಪೂರ್ತಿಯೂ ಬಹುತೇಕರ ನೆಚ್ಚಿನ ಪಾನೀಯ. ಅದರಲ್ಲೂ ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ಆರೋಗ್ಯಯುತ ಎಳನೀರು ಸೇವಿಸುತ್ತಾರೆ. ಆದರೆ, ಎಳನೀರು ಪೂರೈಕೆಯಲ್ಲಿ ವಿಳಂಬದಿಂದಾಗಿ ಬೆಲೆ ಗಗನಕ್ಕೇರಿದೆ. ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಸೇವಿಸುವಂತಾಗಿದೆ.
ಒಂದು ಎಳನೀರಿಗೆ 50 ರೂ. ಇದ್ದ ಬೆಲೆ ಈಗ 70 ರೂ.ಬಂದು ತಲುಪಿದ್ದು, ದಾಹ ತೀರಿಸುತ್ತಿದ್ದ ನೈಸರ್ಗಿಕ ಪಾನೀಯದ ಬೆಲೆ ಏಕದಮ್ ಏರಿರುವುದು ಜನರಿಗೆ ಹೊರೆಯಾಗುತ್ತಿದೆ. ಬಿಸಿಲಿನ ಜಳ ಹೆಚ್ಚುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಕೂಡ ಹೆಚ್ಚುತ್ತಿದೆ ಎನ್ನಲಾಗಿದೆ.