ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದ ಕಾಣಕೋಣದಲ್ಲಿರುವ ಜಗತ್ತಿನ ಅತೀ ಎತ್ತರದ ಶ್ರೀರಾಮನ ಮೂರ್ತಿಯನ್ನು ಇಂದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ದಕ್ಷಿಣ ಅಯೋಧ್ಯೆಯಾಗಿ ರೂಪುಗೊಳ್ಳುತ್ತಿರುವ ಪರ್ತಗಾಳಿ ಜೀವೋತ್ತಮ ಮಠದ ಬಿಲ್ಲಿನಾಕಾರದ ಆದರ್ಶ ಧಾಮ್‌ದಲ್ಲಿರುವ 77ಅಡಿ ಶ್ರೀರಾಮನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ.
ಈ ಮೂರ್ತಿಯನ್ನು ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬೆಂಗಳೂರಿನಲ್ಲಿ ಕೆಂಪೇಗೌಡರ ಮೂರ್ತಿಗಳನ್ನು ವಿನ್ಯಾಸಗೊಳಿಸಿದ ಪ್ರಖ್ಯಾತ ಶಿಲ್ಪಿ `ಪದ್ಮಭೂಷಣ’ ಪುರಸ್ಕೃತ ರಾಮ ಸುತಾರ್ ಅವರೇ ಈ ಶ್ರೀರಾಮನ ಮೂರ್ತಿಯನ್ನು ನಿರ್ಮಿಸಿದ್ದಾರೆ.
ಶ್ರೀಮಠಕ್ಕೆ 550 ಸಂವತ್ಸರಗಳು ತುಂಬಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ `ಸಾರ್ಧ ಪಂಚ ಶತಮಾನೋತ್ಸವ’ ಕಾರ್ಯಕ್ರಮದ ನಿಮಿತ್ತ ಪ್ರಧಾನಿಯವರು ವಿಶೇಷ ಅಂಚೆ ಚೀಟಿ ಹಾಗೂ ನಾಣ್ಯವನ್ನು ಬಿಡುಗಡೆಗೊಳಿಸಲಿದ್ದಾರೆ. ಇದೇ ವೇಳೆ ಶ್ರೀರಾಮನ ಮೂರ್ತಿ ಸುತ್ತಲೂ ರಾಮಾಯಣ ಥೀಮ್ ಪಾರ್ಕ್, ಶ್ರೀರಾಮನ ಮಹಿಮೆ ಸಾರುವ ಮ್ಯೂಸಿಯಂ ಹಾಗೂ 7ಡಿ ರಂಗಮಂದಿರಕ್ಕೂ ಚಾಲನೆ ನೀಡಲಿದ್ದಾರೆ.
ಇನ್ನು ಶ್ರೀಮಠಕ್ಕೆ 550 ಸಂವತ್ಸರ ತುಂಬಿದ ಹಿನ್ನೆಲೆ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದರು, ದೇಶದ 120 ಕೇಂದ್ರಗಳಲ್ಲಿ 550 ಕೋಟಿ ಶ್ರೀರಾಮ ನಾಮ ಜಪ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆದರೆ, 590 ಕೋಟಿಗೂ ಹೆಚ್ಚು ಶ್ರೀರಾಮ ನಾಮ ಜಪ ನಡೆದು ದಾಖಲೆ ಸೃಷ್ಟಿಸಿದೆ. ಈ ನಿಮಿತ್ತ ಶ್ರೀಕ್ಷೇತ್ರ ಬದರಿಯಿಂದ ಹೊರಟು 40 ದಿನಗಳ ಕಾಲ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸಿದ `ಶ್ರೀರಾಮ ದಿಗ್ವಿಜಯ ರಥಯಾತ್ರೆ’ಯೂ ಪರ್ತಗಾಳಿ ಮಠವನ್ನು ತಲುಪಿದೆ. ಈಗ ಹನ್ನೊಂದು ದಿನಗಳ ಕಾಲ ನಡೆಯುತ್ತಿರುವ ಸಾರ್ಧ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲೂ ಪ್ರತಿದಿನ 55ರಂತೆ ಒಟ್ಟು 550 ಹೋಮ-ಹವನಗಳು ನಡೆಯಲಿವೆ.

