ಹೊಸದಿಗಂತ ವರದಿ,ನಾಗಮಂಗಲ:
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗಿರಿ ತಪೋವನಮ್‌ನಲ್ಲಿ ಗುರುವಾರ ಸಂಜೆ ರಾಜ್ಯಮಟ್ಟದ 17ನೇ ಅರ್ಚಕರ ವೃತ್ತಿ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥಸ್ವಾಮೀಜಿ, ಅರ್ಚಕ ವೃತ್ತಿ ಬಹಳ ಪವಿತ್ರವಾದದ್ದು. ತುಂಬಾ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಶಿಬಿರದಲ್ಲಿ ತರಬೇತಿ ಪಡೆದ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ತಮ್ಮ ಊರಿನ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಬೇಕು. ಭಕ್ತರ ಹಾಗೂ ದೇವರ ನಡುವೆ ಸೇತುವೆಯಾಗಿ ಭಗವಂತನ ಸೇವೆಯನ್ನು ಮಾಡಬೇಕು ಎಂದರು.
ಶ್ರೀಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ದೇವಾಲಯ ಸಂವರ್ಧನಾ ಸಮಿತಿ ಸಂಚಾಲಕ ಮನೋಹರ ಮಠದ, ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶ್ರೀಕಾಂತ್ ಪುರೋಹಿತ್ ಸೇರಿದಂತೆ ಶಿಬಿರಾರ್ಥಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ನೂರಾರು ಮಂದಿ ಭಕ್ತರು ಇದ್ದರು.