ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಯಲು ಸೀಮೆ ನಾಡು ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆ ಆಗುತ್ತಿದ್ದು ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣೆ ಮೈದುಂಬಿ ಹರಿಯುತ್ತಿದ್ದಾಳೆ.
ಬಿರು ಬೇಸಿಗೆಯಿಂದ ಖಾಲಿ ಖಾಲಿಯಾಗಿದ್ದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಿಕ್ಕಪಡಸಲಗಿ ಬ್ಯಾರೇಜ್ ರೈತರಿಗಾಗಿ ನಿರ್ಮಿಸಿದ ಬ್ಯಾರೇಜ್ ಆಗಿದ್ದು ಬೇಸಿಗೆಯಲ್ಲಿ ಬರಿದಾಗಿತ್ತು. ನದಿ ತೀರದ ರೈತರು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ನಿರಂತರ ಮಳೆಯಿಂದ ನೀರು ಭರ್ತಿಯಾಗಿದೆ.