ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕರಿಂದ ನಿಗದಿಗಿಂತಲೂ ಅಧಿಕ ಪ್ರಯಾಣ ದರ ವಸೂಲಿ ಮಾಡುತ್ತಿರುವ ಆಟೋ ಚಾಲಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಶಾಕ್ ನೀಡಿದ್ದು, ಒಂದೇ ದಿನ 299 ಪ್ರಕರಣ ದಾಖಲಿಸಿಕೊಂಡು, 114 ಆಟೋಗಳನ್ನು ಜಪ್ತಿ ಮಾಡಿದ್ದಾರೆ.
ಆ್ಯಪ್ ಆಧಾರಿತ ಆಟೋಗಳು ಹಾಗೂ ಇನ್ನಿತರೆ ಆಟೋ ಚಾಲಕರು ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚು ದರ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ದೂರುಗಳು ಬರುತ್ತಿವೆ. ಹೀಗಾಗಿ, ಅಧಿಕ ದರ ವಸೂಲಿ ಮಾಡುತ್ತಿರುವ ಆಟೋಗಳ ಪರ್ಮಿಟ್ ರದ್ದು ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸೂಚನೆ ಬೆನ್ನಲ್ಲೇ ನಗರದಲ್ಲಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ ಎರಡು ತಂಡಗಳಂತೆ ಒಟ್ಟು 22 ತಂಡಗಳು ಕಾರ್ಯಾಚರಣೆ ಕೈಗೊಂಡು ಅಧಿಕ ದರ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 299 ಪ್ರಕರಣ ದಾಖಲಿಸಿ, 114 ಆಟೋಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣದ ಅಧಿಕಾರಿಗಳು ಒಟ್ಟು 48 ಪ್ರಕರಣಗಳನ್ನು ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು ಪಶ್ಚಿಮ 36 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಕೇಂದ್ರ 19 ವಾಹನಗಳನ್ನು ವಶಪಡಿಸಿಕೊಳ್ಳುವ ಮೂಲಕ ವಾಹನ ವಶಪಡಿಸಿಕೊಳ್ಳುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.