ಸಮಾಜದಲ್ಲಿ ಶಾಂತಿ, ಏಕತೆ, ವಿಶ್ವಾಸ ಹೆಚ್ಚಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರ: ಬಿ.ಕೆ ಪ್ರತಿಮಾ ಬಹೆನ್‌ಜಿ

ಹೊಸದಿಗಂತ ಬೀದರ್:

ಸಮಾಜದಲ್ಲಿ ಶಾಂತಿ, ಏಕತೆ ಹಾಗೂ ವಿಶ್ವಾಸ ಹೆಚ್ಚಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳಷ್ಟಿದೆ ಎಂದು ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‌ಜಿ ನುಡಿದರು.

ಗುರುವಾರ ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಾಕುಮಾರೀಸ್ ಪಾವನಧಾಮ ಕೇಂದ್ರದ ಅವರಣದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಏಕತೆ, ವಿಶ್ವಾಸ, ಸುಖ ಸ್ಥಾಪನೆ ಮಾಡಬೇಕಿದೆ. ನಮ್ಮ ನೆರಳು ಯಾವ ರೀತಿ ನಮ್ಮನ್ನು ಹಿಂಬಾಲಿಸುತ್ತದೆಯೋ ಅದೇ ರೀತಿ ಸುಖ ಶಾಂತಿಯು ನಮ್ಮ ಹಿಂದೆ ಬರುತ್ತವೆ. ಆದರೆ ಅದು ನಮ್ಮನ್ನು ಹಿಂಬಾಲಿಸುವಂತಹ ಕಾರ್ಯವನ್ನು ನಾವು ಮಾಡಬೇಕು ಎಂದರು.ಒಬ್ಬನ ಬಳಿ ಸುಖ, ಶಾಂತಿ, ಆನಂದ, ಶಕ್ತಿ, ಪ್ರೇಮ, ಪವಿತ್ರತೆ, ವಿಶ್ವಾಸ ಹೀಗೆ ಸಪ್ತ ಸಕಾರಾತ್ಮಕ ಗುಣಗಳು ಅಡಗಿವೆ. ಆತನು ನಮ್ಮೋಳಗೆ ಬಂದು ನೆಲೆಸಿದರೆ ನಮ್ಮ ಜೀವನ ಶೈಲಿಯೆ ಬದಲಾಗಲಿದೆ. ನಮ್ಮೋಳಗೆ ಆತನ ವಾಸ ನಮ್ಮನ್ನು ಸತ್ಯದ ಕಡೆಗೆ ಕೊಂಡೊಯ್ಯುತ್ತದೆ. ಆತನೇ ಸರ್ವಶಕ್ತನಾದ ಸರ್ವೇಶ್ವರ.ಆತನಿಂದ ನಮಗೆ ಆದ ಆ ಅನುಭವ ಇತರರಿಗೆ ಹಂಚುವುದು ಮನುಷ್ಯನ ಸ್ವಭಾವ. ಹಾಗಾಗಿ ಎಲ್ಲೆಡೆ ಧನಾತ್ಮಕ ವಾತಾವರಣ ನಿರ್ಮಾಣವಾಗಿ ಸತ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಇದು ಆತ್ಮವಿಶ್ವಾಸಕ್ಕೆ ದಾರಿ ಮಾಡುತ್ತದೆ. ಹಾಗಾಗಿ ಮಾಧ್ಯಮಗಳು ಪರಮಾತ್ಮನ ಮನೆಯಿಂದ ಸತ್ಯವನ್ನು ಅರಿತು ಅವನ್ನು ಜಗತ್ತಿನಲ್ಲಿ ಪ್ರಚುರಪಡಿಸಿದಲ್ಲಿ ವಿಶ್ವವೆ ಸತ್ಯದ ದಾರಿಯಲ್ಲಿ ಸಾಗಬಲ್ಲದೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ ಠಾಕೂರ ಮಾತನಾಡಿ, ಪತ್ರಕರ್ತರು ನಿತ್ಯ ಒತ್ತಡದಲ್ಲಿ ಬದುಕುವಂತಾಗಿದೆ. ಆರೋಗ್ಯದ ಕಡೆ ಅವರ ನಿಗಾ ಇಲ್ಲದ ಕಾರಣ ಹೃದಯಘಾತದಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುತ್ತಿರುವರು. ಕೆಲವು ಮಾಧ್ಯಮಗಳು ಸತ್ಯದ ಕಲ್ಪನೆಯಿಂದ ವಿಮುಖರಾಗಿ ಟಿ.ಆರ್.ಪಿ ಗೋಸ್ಕರ ಸುಳ್ಳು ಸುದ್ದಿಗಳು ಹರಡಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿರುವರು. ಇದರಿಂದ ಎಲ್ಲ ಸಮಾಜಗಳು ಮಾಧ್ಯಮಗಳನ್ನು ನೋಡುವ ದೃಷ್ಡಿಕೋನ ಅನುಮಾನದಿಂದ ಕೂಡಿದೆ. ಕಳೆದು ಹೋಗುತ್ತಿರುವ ನಮ್ಮ ಮೌಲ್ಯಗಳು ಎತ್ತಿ ಹಿಡಿಯಲು ಸದಾ ವಿಶ್ವಕಲ್ಯಾಣ ಬಯಸುತ್ತಿರುವ ಬ್ರಹ್ಮಾಕುಮಾರೀಸ್ ಕೇಂದ್ರಗಳತ್ತ ಮುಖ ಮಾಡಬೇಕೆಂದು ಕರೆಕೊಟ್ಟರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, 140 ದೇಶಗಳಲ್ಲಿ ಬ್ರಹ್ಮಕುಮಾರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅಂತಹ ಸಂಸ್ಥೆ ನಮಗಾಗಿ ಪತ್ರಿಕಾ ದಿನಾಚರಣೆ ಮಾಡಲು ಕಾರಣ, ನಿತ್ಯ ಸುದ್ದಿಗಳ ಬೆನ್ನು ಬಿದ್ದು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಿದೆ ಹತ್ತಾರು ತಲೆ ನೋವುಗಳೊಂದಿಗೆ ಬದುಕುವ ನಮಗೆ ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದ ಮಹತ್ವ ತಿಳಿಸಲು ಮತ್ತು ಸಮಾಜದ ಶಾಂತಿ, ಏಕತೆಗೆ ನಮ್ಮ ಪಾತ್ರ ಎಂತಹದ್ದು ಎಂದು ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಹಿರಿಯ ರಾಜಯೋಗ ಶೀಕ್ಷಕಿ ಗುರುದೇವಿ ಅಕ್ಕನವರು, ಪತ್ರಕರ್ತರು ಸುದ್ದಿ ಕೊಡುವುದರೊಂದಿಗೆ ಮಾನವನ ಜೀವನಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡುವ ಕೆಲಸ ಮಾಡಬೇಕು. ಮಾಧ್ಯಮ ಕ್ಷೇತ್ರ ಬಹು ಸುಂದರ ಹಾಗೂ ಪರಿವರ್ತನೆ ತರಬಲ್ಲ ಕ್ಷೇತ್ರ. ತಾವು ಆಧ್ಯಾತ್ಮದೊಂದಿಗೆ ಸಮಾಜದ ಶಾಂತಿಗಾಗಿ ಕಾರ್ಯನಿರ್ವಹಿಸಬೇಕು ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲ ಪತ್ರಕರ್ತರಿಗೆ ಗೌರವ ಸನ್ಮಾನ ಮಾಡಲಾಯಿತು.
ಯೋಗದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಲಾವಿದೆ ಶೀತಲ ಪಾಂಚಾಳ ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಬಿ.ಕೆ ಮಹಾನಂದಾ ಅಕ್ಕನವರು ರಾಜಯೋಗ ಅಭ್ಯಾಸ ಮಾಡಿಸಿದರು. ಬಿ.ಕೆ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ವಂದಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಕೇಂದ್ರದ ಎಲ್ಲ ಸಹೋದರ, ಸಹೋದರಿಯರು, 130ಕ್ಕೂ ಅಧಿಕ ಜಿಲ್ಲೆಯ ಪತ್ರಕರ್ತರು ಕಾರ್ಯಕ್ರಮದಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!