January15, 2026
Thursday, January 15, 2026
spot_img

ಬಾರ್ ಪಾರ್ಟಿ ಬೆನ್ನಲ್ಲೇ ಬೆನ್ನತ್ತಿದ ಸಾವಿನ ನೆರಳು: ಹಳೆಯ ವೈಷಮ್ಯಕ್ಕೆ ರೌಡಿಶೀಟರ್‌ನ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಡುರಾತ್ರಿಯ ವೇಳೆ ರೌಡಿಶೀಟರ್ ಒಬ್ಬರನ್ನು ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಬಳಿ ನಡೆದಿದೆ.

ಕೊಲೆಯಾದ ರೌಡಿಶೀಟರ್ ಲಕ್ಷ್ಮೀಸಾಗರ ಗ್ರಾಮದ ಮಹೇಶ್ (40) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಇತನನ್ನು ಗಡಿಪಾರು ಮಾಡುವ ನಿರ್ಧಾರವನ್ನೂ ಕೈಗೊಂಡಿದ್ದರು.

ಘಟನೆ ವಿವರ:

ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಮಹೇಶ್, ನ್ಯಾಯಾಲಯದ ಕೆಲಸದ ನಿಮಿತ್ತ ಎರಡು ದಿನಗಳ ಹಿಂದೆ ತಮ್ಮ ಊರಾದ ಲಕ್ಷ್ಮೀಸಾಗರಕ್ಕೆ ಬಂದಿದ್ದರು. ನಿನ್ನೆ (ಶನಿವಾರ) ರಾತ್ರಿ ಇವರು ಜಕ್ಕನಹಳ್ಳಿಯಲ್ಲಿರುವ ಬಾರ್‌ವೊಂದರಲ್ಲಿ ತಮ್ಮ ಸ್ನೇಹಿತರಾದ ಮರಿಗೌಡ ಮತ್ತು ಕಿರಣ್ ಅವರೊಂದಿಗೆ ಪಾರ್ಟಿ ಮಾಡಿದ್ದರು.

ನಂತರ ರಾತ್ರಿ ಸುಮಾರು 12:30ರ ಸುಮಾರಿಗೆ ಮೂವರು ಒಂದೇ ಬೈಕಿನಲ್ಲಿ ಗ್ರಾಮದ ಕಡೆಗೆ ಬರುತ್ತಿದ್ದರು. ಈ ವೇಳೆ, ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗುಂಪು ಏಕಾಏಕಿ ಮಹೇಶ್‌ನನ್ನು ಅಡ್ಡಗಟ್ಟಿ, ಲಾಂಗ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದೆ.

ಪೊಲೀಸರ ಪ್ರಾಥಮಿಕ ಶಂಕೆಯ ಪ್ರಕಾರ, ಕೊಲೆಗೈದವರೆನ್ನಲಾದ ಭೀಮ, ರೋಹಿತ್, ಕೇಶವ ಮತ್ತು ಸಿದ್ದರಾಜು ಹಾಗೂ ಮೃತ ಮಹೇಶ್‌ ನಡುವೆ ಹಿಂದಿನಿಂದಲೂ ವೈಷಮ್ಯ ಮತ್ತು ಆಗಾಗ್ಗೆ ಗಲಾಟೆಗಳು ನಡೆದಿರುತ್ತಿದ್ದವು. ಈ ಹಳೆಯ ದ್ವೇಷವೇ ರೌಡಿಶೀಟರ್ ಮಹೇಶ್‌ನ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.

ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಮೇಲುಕೋಟೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Most Read

error: Content is protected !!