ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕಾಶ ಯಾವತ್ತೂ ಮಿತಿಯಲ್ಲ, ನನಗೂ ಅಲ್ಲ, ನಿಮಗೂ ಅಲ್ಲ, ಭಾರತಕ್ಕೂ ಅಲ್ಲ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಹೇಳಿದರು
ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಇಂದು ಆಯೋಜಿಸಿದ್ದ ಫ್ಯೂಚರ್ ಮೇಕರ್ಸ್ ಸಮ್ಮೇಳನದಲ್ಲಿ ಮಾತನಾಡಿದ ಶುಭಾಂಶು ಶುಕ್ಲಾ , ಗಗನಯಾನದ ಹೆಮ್ಮೆಯ ಕ್ಷಣಗಳನ್ನು ಹಂಚಿಕೊಂಡರು.
ಆಕಾಶಕ್ಕೆ ಯಾವತ್ತೂ ಮಿತಿಯಲ್ಲ. ನನಗೂ ಅಲ್ಲ, ನಿಮಗೂ ಅಲ್ಲ, ಭಾರತಕ್ಕೂ ಅಲ್ಲ. ಗಗನದಿಂದ ಭಾರತ ಎಷ್ಟು ಮಿಂಚುತ್ತಿದೆ ಎಂದು ನೋಡಿದ್ದೇವೆ. ಅದಕ್ಕಿಂತ ನಮ್ಮ ಭವಿಷ್ಯ ಹೆಚ್ಚು ಪ್ರಶೋಭಮಾನವಾಗಿದೆ. 2047ಕ್ಕೆ ವಿಕಸಿತ ಭಾರತ ಆಗಲಿದೆ. ಅದನ್ನು ನಾವು ಸಾಧಿಸಲಿದ್ದೇವೆ ಎಂದು ತಿಳಿಸಿದರು.
ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಹಲವು ನವೋದ್ಯಮಗಳು ಆರಂಭವಾಗಿವೆ. ವಿಕಸಿತ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಭಾರತ ಕಕ್ಷೆಯಲ್ಲಿದೆ. ತಂತ್ರಜ್ಞಾನವು ಬಾಹ್ಯಾಕಾಶ ಸಂಶೋಧನೆಗಳಿಗೆ ಅನುವು ಮಾಡಿಕೊಟ್ಟಿದೆ. ನಾವು ಬಾಹ್ಯಾಕಾಶಕ್ಕೆ ಟಚ್ ಸ್ಕ್ರೀನ್ ಬಳಸಿ ಹಾರಿದೆವು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.
2020ರಿಂದ ಗಗನಯಾನಕ್ಕಾಗಿ ನಾನು ತರಬೇತಿ ಪಡೆಯುತ್ತಿದ್ದೇನೆ. ಗಗನಯಾನದ ವೇಳೆ ಮೋಟರ್ ಬೈಕ್ ನಿಮ್ಮ ಹೃದಯದ ಮೇಲೆ ಇಟ್ಟ ಹಾಗೆ ಭಾಸವಾಗುತ್ತದೆ. ಮರಿ ಆನೆ ನಿಮ್ಮ ಎದೆ ಮೇಲೆ ಕೂತ ಹಾಗೆ ಅನ್ನಿಸುತ್ತದೆ. ಬಾಹ್ಯಾಕಾಶಕ್ಕೆ ಹೋದ ಆರು ದಿನಗಳ ಬಳಿಕ ಎಲ್ಲವೂ ಅಭ್ಯಾಸವಾಗುತ್ತದೆ. ಮನಸ್ಸು ಒಗ್ಗಿಕೊಳ್ಳಲು 8-10 ದಿನಗಳು ಬೇಕಾಗುತ್ತದೆ. ಆದರೆ ಬಾಹ್ಯಾಕಾಶದಿಂದ ಮರಳುವಾಗ ನಿಮಗೆ ನಿಜವಾದ ಸಮಸ್ಯೆ ಎದುರಾಗುತ್ತದೆ ಎಂದು ತಮ್ಮ ಅನುಭವವನ್ನು ವಿವರಿಸಿದರು.
ತಲೆ ದೊಡ್ಡದಾದಂತೆ ಭಾಸವಾಗುತ್ತದೆ. ಹೃದಯ ಬಡಿತ ಕಡಿಮೆಯಾಗುತ್ತದೆ. ನಿಮಗೆ ಹಸಿವು ಆಗುವುದಿಲ್ಲ. ನನಗೆ ಮೂರು ನಾಲ್ಕು ದಿನಗಳ ಕಾಲ ಹಸಿವು ಆಗಿಲ್ಲ. ಮಾಂಸಖಂಡ ಇಳಿಕೆಯಾಗುತ್ತದೆ. ನಾನು ಬಾಹ್ಯಾಕಾಶದಲ್ಲಿದ್ದ 20 ದಿನಗಳಲ್ಲಿ 5 ಕೆ.ಜಿ. ತೂಕ ಕಳೆದುಕೊಂಡಿದ್ದೇನೆ. ಮಾನಸಿಕವಾಗಿ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ತಿಳಿಸಿದರು.
ಅತಿ ಶೀಘ್ರದಲ್ಲಿ ಭಾರತೀಯರು ಭಾರತದ ನೆಲದಿಂದಲೇ ಭಾರತೀಯ ಕ್ಯಾಪ್ಸುಲ್ ಮೂಲಕವೇ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಪ್ರತಿಯೊಬ್ಬರೂ ಇದಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಶುಭಾಂಶು ಶುಕ್ಲಾ, ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ ಎಂಬ ವಿಡಿಯೋವನ್ನು ಪ್ರದರ್ಶಿಸಿದರು. ಮೋಡಗಳ ನಡುವೆ ಘರ್ಜಿಸುವ ಸಿಡಿಲು, ಉತ್ತರಕ್ಕೆ ಸಾಗುತ್ತಿದ್ದಂತೆ ಬೆಳಕಿನ ತೇಜಸ್ಸು, ಗಂಭೀರವಾಗಿ ಕುಳಿತ ಹಿಮಾಲಯ ಗೋಚರಿಸುತ್ತದೆ. ಭಾರತದ ನಗರಗಳು ಅದ್ಭುತವಾಗಿ ಕಾಣಿಸುತ್ತದೆ. ಬಳಿಕ ಸೂರ್ಯನ ಕಿರಣಗಳು ಆವರಿಸುವ ವಿಹಂಗಮ ನೋಟವನ್ನು ಪ್ರದರ್ಶಿಸಿದರು. ರಾತ್ರಿ ವೇಳೆಯಲ್ಲಿ ಭಾರತದ ನಗರಗಳು ಹೇಗೆ ಕಾಣಿಸುತ್ತದೆ ಎಂಬುದನ್ನು ವಿಡಿಯೋ ಮೂಲಕ ತೋರಿಸಿದರು. ಬಾಹ್ಯಾಕಾಶದಿಂದ ರಾತ್ರಿ ವೇಳೆ ಬೆಂಗಳೂರು ಜಗಮಗಿಸುತ್ತದೆ ಎಂದು ವಿವರಿಸಿದರು. ಈ ವೇಳೆ ನೆರೆದಿದ್ದ ಸಾವಿರಾರರು ಸಭಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

