ದಿಗಂತ ವರದಿ ಬೆಳಗಾವಿ:
ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ನೀಟ್ ಪರೀಕ್ಷೆ ಅಕ್ರಮ ಬೆಳಗಾವಿಮಲ್ಲಿಯೂ ಸದ್ದು ಮಾಡಿದೆ. ಪರೀಕ್ಷೆ ಪಾಸು ಮಾಡಿಸಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಎಗರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಇಲ್ಲಿನ ಮಾರ್ಕೇಟ್ ಠಾಣೆ ಪೊಲೀಸರು ತೇಲಂಗಾಣ ಮೂಲದ ಅರಗೊಂಡ ಅರವಿಂದ ಅಲಿಯಾಸ್ ಅರುಣಕುಮಾರ (43) ಎಂಬಾತನನ್ನು ಬಂಧಿಸಿದ್ದಾರೆ.
ದೇಶದ ಗಮನ ಸೆಳೆದಿದ್ದ ನೀಟ್ ಹಗರಣದ ತನಿಖೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದು, ಆರೋಪಿಯಿಂದ ಲಕ್ಷಾಂತರ ರೂ., ಲ್ಯಾಪ್ ಟಾಪ್, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದ್ದ ಈ ಆರೋಪಿ, ನೀಟ್ ಪರೀಕ್ಷೆಯಲ್ಲಿ ಪಾಸ್ ಮಾಡಿಸಿ, ಎಂಬಿಬಿಎಸ್ ಸೀಟ್ ಕೊಡಿಸುವದಾಗಿ ನಂಬಿಸಿ ಸುಮಾರು 10ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿಗಳನ್ನು ಪೀಕಿದ್ದ.
ಕೋಟ್ಯಾಂತರ ರೂ.ಗಳನ್ನು ಎಗರಿಸಿ ಪರಾರಿಯಾಗಿದ್ದ ಅಂತರಾಜ್ಯ ಈ ಖದೀಮನನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸರು ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸುಮಾರು ಹತ್ತು ವಿದ್ಯಾರ್ಥಿಗಳಿಂದ 1,30,41,884 ರೂ.ಗಳನ್ನು ಲಪಟಾಯಿಸಿ ಪರಾರಿಯಾಗಿದ್ದ ಈತನನ್ನು ಕಡಡೆಗೂ ಬೆಳಗಾವಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
ಬಂಧಿತ ಆರೋಪಿಯಿಂದ 12 ಲಕ್ಷ ರೂ. ನಗದು ಹಾಗೂ 12,66,900 ಬೆಲೆಯ ವಸ್ತುಗಳನ್ನು ಸೀಜ್ ಮಾಡಿದ್ದಾರೆ ಎಂದು ಡಿಸಿಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.