ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ದಿ. ಗುರುವಪ್ಪ ಎನ್.ಟಿ. ಬಾಳೆಪುಣಿ ಅವರ ‘ದೊಡ್ಡವರು ಇವರು ಸನ್ಮಾನ್ಯರು’ ಕೃತಿ ಲೋಕಾರ್ಪಣೆ

ಹೊಸದಿಗಂತ ವರದಿ, ಮಂಗಳೂರು:

ಹಿರಿಯ ಪತ್ರಕರ್ತ, ಹೊಸ ದಿಗಂತ ಪತ್ರಿಕೆಯ ವಿಶೇಷ ವರದಿಗಾರ ದಿ. ಗುರುವಪ್ಪ ಎನ್.ಟಿ.ಬಾಳೆಪುಣಿ ಅವರ ‘ದೊಡ್ಡವರು ಇವರು ಸನ್ಮಾನ್ಯರು’ ಕೃತಿ ಬಿಡುಗಡೆ ಸಮಾರಂಭ ಮಂಗಳೂರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆಯಿತು.

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಕೃತಿಯನ್ನು ಲೋಕಾರ್ಪಣೆಗೈದು ಮಾತನಾಡಿ, ಗ್ರಾಮೀಣ ಪ್ರದೇಶದ, ಕಿತ್ತಳೆ ಮಾರಾಟ ನಡೆಸಿ ಜೀವನ ನಡೆಸಿದ ನನ್ನನ್ನು ಬಾಳೇಪುಣಿ ಅವರು ಬರಹದ ಮೂಲಕ ಜಗತ್ತಿಗೆ ಪರಿಚಯಿಸಿಕೊಟ್ಟಿದ್ದಾರೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ ಮುಂದೆ ನಾನು ನಿಲ್ಲುವಂತೆ ಮಾಡಿದ್ದಾರೆ ಎಂದು ನೆನಪಿಸಿಕೊಂಡರು.

The Special Correspondent of New Diganta Newspaper. Guruvappa N.T. Balepuni's 'Doddavaru Avanmanyaru' is a world dedication

ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಮಾತನಾಡಿ, ವೈಯಕ್ತಿಕ ಬದುಕಿನಲ್ಲಿ ನೈತಿಕತೆ, ಸಾಮಾಜಿಕ ಬದುಕಿನಲ್ಲಿ ಪಾರದರ್ಶಕತೆ ಹಾಗೂ ಪತ್ರಕರ್ತನಾಗಿ ನಿಷ್ಠುರತೆ ಹೊಂದಿ ಗುರುವಪ್ಪ ಎನ್.ಟಿ. ಬಾಳೇಪುಣಿ ಅವರು ಜೀವನ ನಡೆಸಿದ್ದಾರೆ. ಬಾಳೇಪುಣಿ ಅವರ ಹೆಸರು ಉಳಿಸುವ ಕೆಲಸ ಆಗಬೇಕು, ಅವರ ಅಪೇಕ್ಷೆಯಂತೆ ಕೃತಿಗೆ ನಾನು ಮುನ್ನುಡಿ ಬರೆದಿದ್ದೇನೆ. ಅವರ ಅನುಪಸ್ಥಿತಿಯಲ್ಲಿ ಪುಸ್ತಕ ಬಿಡುಗಡೆಯಾಗುತ್ತಿರುವುದು ಬೇಸರ ತರಿಸಿದೆ ಎಂದರು.

ಕೃತಿ ಬಗ್ಗೆ ಮಾತನಾಡಿದ ಜ್ಞಾನಭಾರತೀ ಪ್ರಕಾಶನದ ಸಿಇಒ, ಹೊಸ ದಿಗಂತ ಪತ್ರಿಕೆಯ ಸಂಪಾದಕ ಪಿ.ಎಸ್. ಪ್ರಕಾಶ್ ಮಾತನಾಡಿ, ಒಳದೃಷ್ಟಿ ಹೊಂದಿರುವವರಿಗೆ ಮಾತ್ರ ಕಾಣಬಹುದಾದ ಸಂಗತಿಗಳನ್ನು, ಸಮಾಜದ ಸ್ಥಿತಿಗತಿಗಳನ್ನು ಬಾಳೇಪುಣಿ ತಮ್ಮ ಬರಹದ ಮೂಲಕ ತೆರೆದಿಟ್ಟಿದ್ದಾರೆ. ದುಶ್ಚಟ ಮುಕ್ತರು, ಕೃಷಿ ಸಾಧಕರು, ವ್ಯವಸ್ಥೆ ಸರಿಪಡಿಸಲು ಹೋರಾಡಿದವರು, ಮಹಿಳೆಯರ ಯಶೋಗಾಥೆಗಳನ್ನು ಬರೆಯುವ ಮೂಲಕ ಸಾಧನೆ ಮಾಡಿದವರ ಆತ್ಮತೃಪ್ತಿಯನ್ನು ಬರಹದ ಮೂಲಕ ತಿಳಿಸಿದ್ದಾರೆ. ಈ ಬರಹಗಳು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಗಳಲ್ಲಿ ನಡೆಯುವ ಸಂಗತಿಗಳ ಕೈಗನ್ನಡಿಯಾಗಿದೆ ಎಂದರು.

ಚಿತ್ತಾರ ಬಳಗದ ಸ್ಥಾಪಕ ಸಂಚಾಲಕ ಚಂದ್ರಶೇಖರ ಪಾತೂರು ಮಾತನಾಡಿ, ಬಾಳೇಪುಣಿ ಅವರ ಬರಹಗಳಿಗೆ ಹೊಸ ದಿಗಂತ ಅವಕಾಶ ನೀಡಿದೆ ಎಂದು ಪ್ರತಿ ಸಂದರ್ಭದಲ್ಲೂ ಅವರು ಹೇಳುತ್ತಿದ್ದರು. ಪಂಚಾಯತ್‌ರಾಜ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಬಾಳೇಪುಣಿ ಅವರು ಪಂಚಾಯತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಜತೆ ಉತ್ತಮ ಒಡನಾಟ ಹೊಂದಿದ್ದರು ಎಂದರು.

ಕೃತಿ ಪ್ರಕಾಶಕ ಮಿಥುನ ಕೊಡೆತ್ತೂರು ಮಾತನಾಡಿ, ತನ್ನ ಪುಸ್ತಕ ಬಿಡುಗಡೆ ಬಾಳೇಪುಣಿ ಅವರ ಕನಸಾಗಿತ್ತು. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಪುಸ್ತಕ ಬಿಡುಗಡೆಯಾಗಬೇಕು ಎಂಬುದು ಅವರ ಇಚ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ -ಲಾಪೇಕ್ಷೆ ಇಲ್ಲದೆ ಕೃತಿಯನ್ನು ಮುದ್ರಣ ಮಾಡಲಾಗಿದೆ. ಬಾಳೇಪುಣಿ ಅವರೂ ಸ್ವತಃ ಸಾಧಕರಾಗಿದ್ದು, ಅವರ ಬಗ್ಗೆ ಪುಸ್ತಕ ಪ್ರಕಟಿಸಲಾಗುವುದು ಎಂದರು.

ಇದೇ ಸಂದರ್ಭ ಕೃತಿಯ ಪ್ರಕಾಶಕ ಅನಂತ ಪ್ರಕಾಶ ಕಿನ್ನಿಗೋಳಿಯ ಮಿಥುನ ಕೊಡೆತ್ತೂರು, ವಿನ್ಯಾಸ ನಡೆಸಿದ ಹೊಸ ದಿಗಂತ ಉಪಸಂಪಾದಕ ಹರೀಶ್ ಕೊಡೆತ್ತೂರು ಅವರನ್ನು ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಅವರು ಸನ್ಮಾನಿಸಿದರು.

ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್. ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!