March 13, 2026
Friday, March 13, 2026
spot_img

ಕೇಣಿ ಕಡಲತೀರದಲ್ಲಿ ಶಿವನ ಮರಳ ಕಲಾಕೃತಿ ವೈಭವ: ಕೋಟೆಗುಡ್ಡದ ತಪ್ಪಲಲ್ಲಿ ಭಕ್ತಿ-ಕಲೆಯ ಸಂಗಮ!

ಹೊಸದಿಗಂತ ಅಂಕೋಲಾ:

ಪೌರಾಣಿಕ ಇತಿಹಾಸ ಹಾಗೂ ಪ್ರಕೃತಿಯ ವಿಸ್ಮಯಗಳ ಸಂಗಮವಾಗಿರುವ ಕೇಣಿಯ ಕೋಟೆಗುಡ್ಡದ ಕಡಲ ತೀರವು ಭಾನುವಾರ ಭಕ್ತಿ ಹಾಗೂ ಕಲೆಯ ಆರಾಧನೆಗೆ ಸಾಕ್ಷಿಯಾಯಿತು. ಈ ತೀರದಲ್ಲಿ ಸ್ಥಳೀಯ ಕಲಾವಿದ ಅರುಣ ನಾಯ್ಕ ಅವರು ಮರಳಿನಿಂದಲೇ ನಿರ್ಮಿಸಿದ ಬೃಹತ್ ಶ್ರೀಪರಮೇಶ್ವರ ಮತ್ತು ಶಿವಲಿಂಗದ ಕಲಾಕೃತಿಗಳು ಸಾರ್ವಜನಿಕರ ವಿಶೇಷ ಗಮನ ಸೆಳೆದವು.

ಕೇಣಿಯ ಕೋಟೆಗುಡ್ಡದ ಶಿಖರದಲ್ಲಿ ಶಿವ ಮತ್ತು ಪಾರ್ವತಿಯನ್ನು ಹೋಲುವ ನೈಸರ್ಗಿಕ ಶಿಲೆಗಳಿದ್ದು, ಅವುಗಳ ಎದುರಿಗೇ ನಂದಿಯ ಆಕೃತಿಯ ಬಂಡೆಯಿದೆ. ಅಚ್ಚರಿಯೆಂದರೆ, ಈ ನಂದಿ ಬಂಡೆಯಿಂದ ನಿರಂತರವಾಗಿ ಸಿಹಿ ನೀರು ಹರಿಯುತ್ತಿದ್ದು, ಇದು ಇಲ್ಲಿನ ಭಕ್ತರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಗುಡ್ಡದ ಮೇಲೆಯೇ ಶಿವ-ಪಾರ್ವತಿಯರು ನೆಲೆಸಿದ್ದಾರೆ ಎಂಬುದು ಸ್ಥಳೀಯ ಮೀನುಗಾರರ ಅಚಲ ವಿಶ್ವಾಸ.

ಸೂರ್ಯಾಸ್ತದ ಸುಂದರ ಕ್ಷಣದಲ್ಲಿ ಸುತ್ತಮುತ್ತಲಿನ ನೂರಾರು ಮೀನುಗಾರರು ಕಡಲತೀರದಲ್ಲಿ ಜಮಾಯಿಸಿದರು. ಅರುಣ ನಾಯ್ಕ ಅವರ ಕೈಚಳಕದಲ್ಲಿ ಮೂಡಿಬಂದ ಆಕರ್ಷಕ ಶಿವನ ಮೂರ್ತಿ ಹಾಗೂ ಶಿವಲಿಂಗಕ್ಕೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ಭಕ್ತರು, ಬಳಿಕ ಕೋಟೆಗುಡ್ಡದತ್ತ ದೀಪದಾರತಿ ಬೆಳಗಿ ಭಕ್ತಿ ಅರ್ಪಿಸಿದರು.

ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭೆಯಲ್ಲಿ ವಿವಿಧ ಭಾಗಗಳ ಮೀನುಗಾರ ಮುಖಂಡರು. ಕೇಣಿ ವಾಣಿಜ್ಯ ಬಂದರು ವಿರೋಧಿ ಸಮಿತಿಯ ಪ್ರಮುಖರು. ಸ್ಥಳೀಯ ಗ್ರಾಮಸ್ಥರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಕೃತಿ ದತ್ತವಾದ ಕಲ್ಲುಗಳ ನಡುವೆ ಕಲಾವಿದನ ಮರಳ ಶಿಲ್ಪದ ಮೂಲಕ ಶಿವನ ಆರಾಧನೆ ನಡೆದಿದ್ದು ಕೇಣಿ ತೀರದ ಜನರಲ್ಲಿ ಹೊಸ ಚೈತನ್ಯ ತುಂಬಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !