ಹೊಸದಿಗಂತ ಡಿಜಿಟಲ್ ಡೆಸ್ಕ್:
5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ (Public Exam) ನಡೆದಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಇದರ ಭವಿಷ್ಯ ಇನ್ನೂ ನಿರ್ಧಾರ ಇನ್ನೂ ಆಗಿಲ್ಲ. ಈ ಕಾರಣ ಈ ಮೂರೂ ತರಗತಿವಾರು ಮೌಲ್ಯಾಂಕನದ ವಿಶ್ಲೇಷಣೆ ಮಾಡಿ, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ದಾಖಲಿಸುವ ಗೊಂದಲದಲ್ಲಿ ಶಿಕ್ಷಣ ಇಲಾಖೆ ಇದೆ. ಈಗ ಈ ಸಂಬಂಧ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಈಗಾಗಲೇ ಶಾಲೆಗಳಲ್ಲಿ ಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಅಗ್ರಿಗೇಟ್ ಮಾಡಿ ಮುಂದಿನ ತರಗತಿಗಳಿಗೆ ದಾಖಲಿಸಲು ಮುಂದಾಗಿದೆ.
ಸರ್ವೋಚ್ಚ ನ್ಯಾಯಾಲಯವು 2024ರ ಏಪ್ರಿಲ್ 08ರಂದು ಪಬ್ಲಿಕ್ ಪರೀಕ್ಷೆಗೆ ತಡೆಯಾಜ್ಞೆ ನೀಡಿತ್ತು. ಈಗ ಈ ಸಂಬಂಧ ತೀರ್ಪು ಪ್ರಕಟವಾಗುವ ಮೂಲಕ ಪಬ್ಲಿಕ್ ಪರೀಕ್ಷೆಯ ಬಗ್ಗೆ ನಿರ್ಧಾರವಾಗಬೇಕಿದೆ. ಅಂದರೆ, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ SA-2 ಮೌಲ್ಯಾಂಕನ ಕಾರ್ಯ ಮುಗಿದಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ದಿನಾಂಕ: 08-04-2024ರಂದು ಫಲಿತಾಂಶವನ್ನು ಪ್ರಕಟಿಸಲು ತಿಳಿಸಲಾಗಿತ್ತು. ಬಳಿಕ ಫಲಿತಾಂಶವನ್ನು ಪ್ರಕಟಿಸಲು ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದ್ದು, ಅಂತಿಮ ತೀರ್ಪು ಬಾಕಿ ಇದೆ. ಹೀಗಾಗಿ ಮುಂದಿನ ಪ್ರವೇಶಾತಿಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ: 8142/2024, 8136/2024 ಮತ್ತು 8127/2024ರ ಮಧ್ಯಂತರ ತೀರ್ಪಿನಂತೆ, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ SA-2 ಮೌಲ್ಯಾಂಕನವನ್ನು ತಡೆಹಿಡಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಶಾಲೆಗಳಲ್ಲಿ ನಡೆದಿರುವ FA- 1, FA-2, FA-3, FA-4 ಮತ್ತು SA-1 ಗಳ ಮೌಲ್ಯಾಂಕನದ ಆಧಾರದ ಮೇಲೆ ಮಕ್ಕಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರಿಸಲು ಅವಕಾಶ ಕಲ್ಪಿಸುವ ನಿರ್ಧಾರವನ್ನು ಕೈಗೊಂಡಿದ್ದಾಗಿ ಆದೇಶದಲ್ಲಿ ತಿಳಿಸಲಾಗಿದೆ.