ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಬುದ್ಧಿಮತ್ತೆ, ಉನ್ನತ ಶಿಕ್ಷಣ,ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರಕ್ಕೆ ಜರ್ಮನಿಯ ಬವೇರಿಯಾ ಜೊತೆ ರಾಜ್ಯ ಸರ್ಕಾರ ಇಂದು ಒಪ್ಪಂದ ಮಾಡಿಕೊಂಡಿದೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮಾಹಿತಿ–ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬವೇರಿಯಾ ಚಾನ್ಸಲರಿ ಮುಖ್ಯಸ್ಥ ಪ್ಲೋರಿಯನ್ ಹರ್ಮನ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಒಪ್ಪಂದದ ನಂತರ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಕೈಗಾರಿಕೆ, ವೈದ್ಯಕೀಯ, ಪರಿಸರ ತಂತ್ರಜ್ಞಾನ, ನಗರ ಮೂಲಸೌಕರ್ಯ, ಕೌಶಲಾಭಿವೃದ್ಧಿ, ನೇಮಕ, ಉದ್ಯಮಶೀಲತೆ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ನೀಡಲಾಗುತ್ತದೆ. ಈ ಒಪ್ಪಂದ ಐದು ವರ್ಷಗಳವರೆಗೆ ಇರುತ್ತದೆ. ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ವಲಯಗಳ ಬಗ್ಗೆ ಗಮನ ಹರಿಸಲು ಅವಕಾಶವಾಗಲಿದೆ. ಕೌಶಲಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಕಾರ್ಯ ಗುಂಪುಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದರು.