ಕೇಂದ್ರ ಸರ್ಕಾರದ ಜಾತೀವಾರು ಜನಗಣತಿಗೆ ರಾಜ್ಯ ಸರ್ಕಾರದ ಯಾವುದೇ ತಕರಾರಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ

ಹೊಸದಿಗಂತ ದಾವಣಗೆರೆ:

ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ಜಾತಿ ಗಣತಿ. ನಾವು ಮಾಡುತ್ತಿರುವುದು ಜಾತಿ ಗಣತಿ ಸೇರಿದಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ. ಹೀಗಾಗಿ ಕೇಂದ್ರದಿಂದ ಜಾತಿಗಣತಿ ಕೈಗೊಳ್ಳಲು ನಮ್ಮ ತಕರಾರು ಇಲ್ಲ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೨೭ರಿಂದ ಕೇಂದ್ರ ಸರ್ಕಾರವು ಜಾತಿಗಣತಿ ಕೈಗೊಳ್ಳುವುದಾಗಿ ಹೇಳಿದೆ. ಆದರೆ, ಕೇಂದ್ರವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಕೈಗೊಳ್ಳುವುದಾಗೇನೂ ಹೇಳಿಲ್ಲ. ಕೇಂದ್ರದ ಜಾತಿಗಣತಿಗೂ ನಮ್ಮ ಸಮೀಕ್ಷೆಗೂ ವ್ಯತ್ಯಾಸವಿದೆ. ನಮ್ಮದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ. ಇದರಲ್ಲೇ ಜಾತಿಗಣತಿಯೂ ಬರುತ್ತದೆ. ಆದರೆ, ಕೇಂದ್ರ ಕೈಗೊಳ್ಳುತ್ತಿರುವುದು ಜಾತಿಗಣತಿಯಷ್ಟೇ ಎಂದರು.

ಸಾಮಾಜಿಕ ನ್ಯಾಯ ಕಲ್ಪಿಸಲು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಯೂ ಗೊತ್ತಿರಬೇಕಾಗುತ್ತದೆ. ಅದು ಗೊತ್ತಿಲ್ಲದಿದ್ದರೆ ಸಾಮಾಜಿಕ ನ್ಯಾಯ ಒದಗಿಸುವುದು ಕಷ್ಟ. ಅದಕ್ಕಾಗಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿ ಮಾಡಬೇಕಾಗುತ್ತದೆ. ಅದಕ್ಕಾಗಿ ಈ ಸಮೀಕ್ಷೆ ಕೈಗೊಂಡಿದ್ದೇವೆ. ಸಮೀಕ್ಷೆಗೆ ದುರ್ಬಲರು, ಪ್ರಬಲರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಸೆಕ್ಷನ್ 11(1)ರ ಪ್ರಕಾರ ವರದಿಗೆ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸದಾಗಿ ಮರು ಸಮೀಕ್ಷೆಯಾಗಬೇಕಿದ್ದು, ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಮರು ಸಮೀಕ್ಷೆ ಕೈಗೊಳ್ಳುವುದಕ್ಕೆ ಹೇಳಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹಾಜರಿದ್ದರು. ಇದೇ ವೇಳೆ ಅನೇಕ ಪಕ್ಷ, ಸಂಘಟನೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಪತ್ರ ಸಲ್ಲಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!