ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹುಲಿ ಉಗುರು ಧರಿಸಿದ ಪ್ರಕರಣ ಹಲವು ಜನರಿಗೆ ಸಂಕಷ್ಟ ತಂದಿಟ್ಟಿದ್ದು, ಇದೀಗ ರಾಜ್ಯ ಸರ್ಕಾರದಿಂದ ವನ್ಯಜೀವಿ ವಸ್ತುಗಳು, ಅಂಗಾಂಗ ಸಂಗ್ರಹಣ ಪ್ರಕರಣದ ತಡೆಗಾಗಿ ಮಹತ್ವದ ಕ್ರಮವನ್ನು ಕೈಗೊಂಡಿದೆ. ಈ ಸಂಬಂಧ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಿ ಆದೇಶಿಸಿದೆ.
ಈ ಕುರಿತಂತೆ ಅರಣ್ಯ ಪಡೆಯ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ.
ವನ್ಯಜೀವಿ ವಸ್ತುಗಳ ಸಂಗ್ರಹಣೆಗೆ ಕಾನೂನಿನಲ್ಲಿ ಸ್ಪಷ್ಟವಾದ ನಿಬಂಧನೆಗಳಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಯಾವುದೇ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹವು ನಿಷೇಧಿಸಲಾಗಿದ್ದು, ಒಂದು ವೇಳೆ ವನ್ಯಜೀವಿಗಳಿಗೆ ಸಂಬಂಧಿಸಿದ ಅಂತಹ ಯಾವುದಾದರೂ ವಸ್ತುವನ್ನು ಹಿಂದಿನವರು ಸಂಗ್ರಹವಿದ್ದಲ್ಲಿ, ಕೂಡಲೇ ಇಲಾಖೆಗೆ ಒಪ್ಪಿಸುವಂತೆ, ಇಲ್ಲವೇ ಪರವಾನಗಿ, ದೃಢೀಕರಣ ಪತ್ರ ಪಡೆಯುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಇವರ ನೇತೃತ್ವದ ಸಮಿತಿಯೊಂದನ್ನು ರಚಿಸಿ, ವನ್ಯಜೀವಿ ವಸ್ತುಗಳ ಸಂಗ್ರಹ ನಿಷೇಧ ಕಾಯ್ದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ ಪ್ರಕರಣಗಳೆಷ್ಟು? ಕಾನೂನಿನಡಿಯಲ್ಲಿ ಕೈಗೊಂಡ ಕ್ರಮಗಳ ಸಂಪೂರ್ಣ ವಿವರ ಸೇರಿದಂತೆ ಹಾಲಿ ಪ್ರಕರಣಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಶಿಪಾರಸ್ಸು ಮತ್ತು ಈ ನಿಟ್ಟಿನಲ್ಲಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸುದೀರ್ಘವಾದ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ.
ಉನ್ನತಾಧಿಕಾರಿಗಳ ಸಮಿತಿಯಲ್ಲಿ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಇವರನ್ನು ಮುಖ್ಯಸ್ಥರನ್ನಾಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಇವರನ್ನು ಸದಸ್ಯರನ್ನಾಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ನಗರ, ತುಮಕೂರು, ಕೊಪ್ಪ, ಶಿವಮೊಗ್ಗ ಇವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಈ ತಂಡವು ವನ್ಯಜೀವಿ ವಸ್ತುಗಳ ಸಂಗ್ರಹ ನಿಷೇಧ ಕಾಯ್ದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ ದೂರುಗಳ ಪ್ರಕರಣಗಳ ಪಟ್ಟಿ, ಕೈಗೊಂಡ ಕ್ರಮ, ಹಾಲಿ ಪ್ರಕರಣಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಶಿಫಾರಸ್ಸು ಮತ್ತು ಈ ನಿಟ್ಟಿನಲ್ಲಿ ನಿಯಮಗಳ್ನು ಇನ್ನಷ್ಟು ಬಿಗಿಗೊಳಿಸಲು ಕೈಗೊಳ್ಳಬೇಕಾದ ಕ್ರಮದ ವರದಿಯನ್ನು ಒಂದು ವಾರದೊಗಳಗೆ ಸ್ಲಲಿಸಲು ಸೂಚಿಸಿದ್ದಾರೆ.