ಹೊಸದಿಗಂತ ವರದಿ ಬೀದರ್ :
ಇಡೀ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದ ಮಾಜಿ ಸಚಿವ ದಿ.ಭೀಮಣ್ಣ ಖಂಡ್ರೆ,ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದರು. ವಿಶೇಷವಾಗಿ ಸಹಕಾರ ಕ್ಷೇತ್ರಕ್ಕೆ ಅವರ ಕೊಡುಗೆ ಬಹಳಷ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೀದರ್ ಜಿಲ್ಲೆಯ ಭಾಲ್ಕಿಯ ಶಾಂತಿಧಾಮದಲ್ಲಿ ನಡೆದ ಡಾ.ಭೀಮಣ್ಣ ಖಂಡ್ರೆಯವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಬಳಿಕ ನುಡಿನಮನ ಸಲ್ಲಿಸಿದ ಅವರು,ದಿ.ಭೀಮಣ್ಣ ಖಂಡ್ರೆ ೧೯೫೩ರಲ್ಲಿ ಪುರಸಭೆ ಅಧ್ಯಕ್ಷರಾಗಿ,ಶಾಸಕರಾಗಿ, ಮೇಲ್ಮನೆ ಸದಸ್ಯರಾಗಿ, ಒಮ್ಮೆ ಸಚಿವರಾಗಿ ಕೆಲಸ ಮಾಡಿದ್ದಾರೆ.ಸಮಾಜವಾದಿ ತತ್ವಗಳಿಂದ ಪ್ರೇರಣೆ ಪಡೆದು, ಸರಳವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದರು ಎಂದರು.
ರಾಜಕಾರಣ ಅಷ್ಟೇ ಅಲ್ಲ,ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸೇವೆ ಮಾಡಿದ್ದಾರೆ.ಕೊನೆ ಘಳಿಗೆವರೆಗೂ ನಿಷ್ಠುರವಾಗಿ, ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದು, ಏಕೀಕರಣದ ಹೋರಾಟದಲ್ಲಿ ಭಾಗವಹಿಸಿ, ಇವತ್ತು ಬೀದರ್ ಜಿಲ್ಲೆ ಕರ್ನಾಟಕದಲ್ಲಿ ಉಳಿದಿದ್ರೆ ಅವರ ಹೋರಾಟದ ಫಲ ಎಂದರು.
ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ತುಂಬಿದ ಸಂದರ್ಭದಲ್ಲಿ ನಾನು ಬಂದಿದ್ದೆ, ಬಹಳಷ್ಟು ವರ್ಷ ಬಾಳಲಿ ಎಂದು ಶುಭ ಹಾರೈಕೆಗಳು ನೀಡಿದ್ದೆ.ನೂರು ವರ್ಷಗಳ ಕಾಲ ಸುದೀರ್ಘ ರಾಜಕಾರಣ ಮಾಡುವುದರ ಜೊತೆ ಜೊತೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.ಎಲ್ಲ ಲಿಂಗಾಯತ ಉಪ ಜಾತಿಗಳನ್ನು ಒಂದು ಮಾಡುವಂತಹ ಕಾರ್ಯಗಳನ್ನು ಮಾಡಿದ್ದ ಅವರು, ಅವರ ಅಗಲಿಕೆಯಿಂದ ರಾಜ್ಯವೂ ಒಂದು ದೊಡ್ಡ ಶಕ್ತಿಯನ್ನೇ ಕಳೆದುಕೊಂಡಿದೆ ಎಂದ ಅವರು, ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದರು.


