ವಿಧಾನಸೌಧದ ಆವರಣದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಪ್ರತಿಮೆ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜನವರಿ 27) ಅನಾವರಣಗೊಳಿಸಿದರು

ಶಿಲ್ಪಿ ಶ್ರೀಧರ್ ಮೂರ್ತಿ ನಿರ್ಮಾಣ ಮಾಡಿರುವ ಈ ಕಂಚಿನ ಪ್ರತಿಮೆ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

Imageಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸ್ಪೀಕರ್ ಯು ಟಿ ಖಾದರ್ ಹಾಗೂ ಸಚಿವರು, ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬರೋಬ್ಬರಿ 21.24 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ರಾಜ್ಯದ ಲಾಂಛನ ಗಂಡ ಭೇರುಂಡ, ಮೈಸೂರು ಲಾಂಛನ ಹಾರದಲ್ಲಿ ಕೆತ್ತನೆ ಮಾಡಲಾಗಿದೆ. ಚಾಲುಕ್ಯರು ಹಾಗೂ ಹೊಯ್ಸಳ ಶೈಲಿಯ ಸಮ್ಮಿಶ್ರ ರೂಪದಲ್ಲಿ ನಾಡದೇವಿ ಪ್ರತಿಮೆ ಇದ್ದು , ಪೀಠ ಮತ್ತು ಹಿಂಬದಿ ಕರ್ನಾಟಕ ನಕ್ಷೆ, ಉಬ್ಬುಶಿಲ್ಪವನ್ನು ಕಲಾಕೃತಿ ಒಳಗೊಂಡಿದೆ.

Imageದೇವಿ ಮೂರ್ತಿ ಚಾಲುಕ್ಯ, ಆಭರಣಗಳು ಹೊಯ್ಸಳರ ಶೈಲಿಯಲ್ಲಿದೆ. ಮುಕುಟದಲ್ಲಿ ಮಯೂರ ಧ್ವಜ,ನವರತ್ನಗಳ ಜಡೆ, ಮಂಗಳೂರು ಮಲ್ಲಿಗೆಯಿಂದ ಅಲಂಕೃತ ತುರುಬು, ಎರಡು ಕಿವಿಗಳ ಕೆಳಗೆ ಮಕರ ತೋರಣ, ಕಂಠಿಹಾರ ದಲ್ಲಿ ಗಂಡಭೇರುಂಡ ಕೆತ್ತನೆ, ಹೆಗಲಿನಿಂದ ಕಾಲಿನವರೆಗೆ ವೈಜಯಂತಿ ಮಾಲೆ, ಹೊಯ್ಸಳರ ಶೈಲಿನ ಕಾಲುಗಳುಳ್ಳ ಸಿಂಹಾಸನದ ಮೇಲೆ ತಾಯಿ ವಿರಾಜಮಾನವಾಗಿದ್ದಾಳೆ.

ಕಟ್ಟು, ಹಿಂಬದಿಯಲ್ಲಿ ಕರ್ನಾಟಕ ನಕ್ಷೆಯ ಉಬ್ಬುಶಿಲ್ಪವು ರಾಜ್ಯದ ಭೂಮೇಲ್ಮ ಲಕ್ಷಣ ಸಾರುತ್ತದೆ. ಕರ್ನಾಟಕ ಸೇರಿ ದೇಶದ ಹಲವು ನೂರಾರು ಶಿಲ್ಪಕೃತಿಗಳನ್ನು ಕೊಟ್ಟಿರುವ ನುರಿತ ಶಿಲ್ಪಿ ಶ್ರೀಧರಮೂರ್ತಿ ನೇತೃತ್ವದಲ್ಲಿ 80 ಜನರ ತಂಡ, 12 ತಿಂಗಳು ಕಾಲ‌ ಪರಿಶ್ರಮದಿಂದ ಈ ಭವ್ಯ ಪ್ರತಿಮೆ ತಯಾರಾಗಿದೆ.

ನೆಲಮಟ್ಟದಿಂದ ಪ್ರತಿಮೆ 43.6 ಅಡಿ ಎತ್ತರ ಇದ್ದು, ಪ್ರತಿಮೆಯ ಲೋಹದ ತೂಕ 31.50 ಟನ್ ಇದೆ. ಭುವನೇಶ್ವರಿ ಪ್ರತಿಮೆ – 20 ಟನ್, ಪ್ರತಿಮೆ ಹಿಂದಿನ ಕರ್ನಾಟಕ ನಕ್ಷೆ – 11.50 ಟನ್ ಇದ್ದು, ಕಟ್ಟಡದ ಕಲ್ಲು ಪೀಠ – ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಿಣ ಪಥದ ಸುತ್ತ ಕರ್ಣಕೂಟ, ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಾಣ ಮಾಡಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!