ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿರುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ತಿರುವನಂತಪುರ ಸೆಕ್ರೆಟರಿಯೇಟ್‌ನಲ್ಲಿ ಸಂತ್ರಸ್ತ ತಾಯಂದಿರು, ಮಕ್ಕಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಸಿ.ಎಚ್.ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಚಿವೆ ಆರ್.ಬಿಂದು ಅವರು 1,031 ಸಂತ್ರಸ್ತರನ್ನು ಪಟ್ಟಿಯಿಂದ ಹೊರತುಪಡಿಸಿರುವುದಾಗಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರೋಧಿಸಿ ಜು.17ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲು ಕೂಡಾ ಸಭೆಯಲ್ಲಿ ನಿರ್ಧರಿಸಲಾಗಿದೆ. 2017ರಲ್ಲಿ ನಡೆಸಲಾದ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1031 ಮಂದಿ ಸಂತ್ರಸ್ತರಿಗೆ ಸರ್ಕಾರದ ಎಲ್ಲ ಸವಲತ್ತು ನೀಡುವಂತೆ ಆಗ್ರಹಿಸಿ ಕಳೆದ ಹಲವು ತಿಂಗಳಿಂದ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಎದುರು ಸತ್ಯಾಗ್ರಹ ನಡೆಸಲಾಗುತ್ತಿತ್ತು.
ಈ ಬಗ್ಗೆ ಶಾಸಕ, ಮಾಜಿ ಸಚಿವ ಇ.ಚಂದ್ರಶೇಖರನ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲ ಐದು ಶಾಸಕರು ಮುಖ್ಯಮಂತ್ರಿ ಮುಂದೆ ಈ ವಿಷಯ ಪ್ರಸ್ತಾಪಿಸಿದ್ದು, ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಧರಣಿ ವಾಪಸ್ ಪಡೆಯಲಾಗಿತ್ತು. ಇದೀಗ ಸಚಿವೆಯ ಹೇಳಿಕೆ ಬೆನ್ನಲ್ಲೇ ಸಂತ್ರಸ್ತರ ಪಟ್ಟಿಯನ್ನು ಬುಡಮೇಲುಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಸಮಿತಿ ಈ ನಿರ್ಧಾರಕ್ಕೆ ಬಂದಿದೆ.