May 13, 2026
Wednesday, May 13, 2026
spot_img

ಗುರೂಜಿ ಆಶ್ರಮದಲ್ಲಿ ಸೂಪರ್‌ ಸ್ಟಾರ್‌ಗೆ ಸಿಗಲಿಲ್ಲ ಕಿಮ್ಮತ್ತು: ಅಧ್ಯಾತ್ಮದ ಪವರ್ ನೋಡಿ ದಂಗಾದ ತಲೈವಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಧ್ಯಾತ್ಮದ ಮುಂದೆ ಎಂತಹ ದೊಡ್ಡ ಅಧಿಕಾರ, ಅಂತಸ್ತು ಅಥವಾ ಜನಪ್ರಿಯತೆಯೂ ಶೂನ್ಯ ಎಂಬುದಕ್ಕೆ ‘ಆರ್ಟ್ ಆಫ್ ಲಿವಿಂಗ್’ ಆಶ್ರಮದಲ್ಲಿ ತಮಗಾದ ಅನುಭವವೇ ಸಾಕ್ಷಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಮ್ಮ ವೃತ್ತಿಜೀವನದ ಬಿಡುವಿಲ್ಲದ ವೇಳೆಯಲ್ಲಿ ಕೇವಲ ಎರಡು ದಿನಗಳ ವಿಶ್ರಾಂತಿಗಾಗಿ ಆಶ್ರಮಕ್ಕೆ ಬಂದಿದ್ದ ರಜನಿಕಾಂತ್, ಅಲ್ಲಿನ ದಿವ್ಯ ಪರಿಸರಕ್ಕೆ ಮಾರುಹೋಗಿ ಬರೋಬ್ಬರಿ ಅರ್ಧ ತಿಂಗಳು ಅಲ್ಲೇ ನೆಲೆಸಿದ್ದರಂತೆ. “ಅಲ್ಲಿನ ಕೆರೆ, ಹಸಿರು ಹಾಗೂ ಜನರ ಮುಖದ ಮೇಲಿರುವ ನಗು ನನ್ನನ್ನು ಆಕರ್ಷಿಸಿತು. ಆನೆ, ಕುದುರೆಗಳ ನಡುವೆ ನೂರಾರು ಹಸುಗಳ ಆರೈಕೆ ಮಾಡಲಾಗುತ್ತಿತ್ತು. ಅಲ್ಲಿನ ಒಂದು ಕುದುರೆಗೆ ‘ರಜಿನಿ’ ಎಂದು ಹೆಸರಿಟ್ಟಿರುವುದು ಕೇಳಿ ನನಗೆ ತುಂಬಾ ಖುಷಿಯಾಯಿತು” ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸ್ಟಾರ್‌ಡಮ್‌ನ ಉತ್ತುಂಗದಲ್ಲಿದ್ದಾಗ ಆಶ್ರಮಕ್ಕೆ ಭೇಟಿ ನೀಡಿದ್ದ ರಜನಿಕಾಂತ್‌ಗೆ ಗುರೂಜಿಯವರು ಆಶ್ರಮದ ಸುತ್ತ ಒಂದು ಸುತ್ತು ಹಾಕೋಣ ಬನ್ನಿ ಎಂದರಂತೆ. ಈ ವೇಳೆ ರಜನಿಕಾಂತ್ ಅವರಿಗೆ ಒಂದು ಸಣ್ಣ ಆತಂಕವಿತ್ತಂತೆ. ತಮಿಳುನಾಡಿನ ಸಾವಿರಾರು ಜನ ಅಲ್ಲಿರುವುದರಿಂದ, ತನ್ನನ್ನು ನೋಡಿದ ಕೂಡಲೇ ಜನ ಮುಗಿಬೀಳಬಹುದು, ಆಟೋಗ್ರಾಫ್ ಅಥವಾ ಸೆಲ್ಫಿಗಾಗಿ ಕಿರಿಕಿರಿ ಉಂಟಾಗಬಹುದು ಎಂಬುದು ಅವರ ಯೋಚನೆಯಾಗಿತ್ತು.

ಆದರೆ ಅಲ್ಲಿ ನಡೆದದ್ದೇ ಬೇರೆ! “ನಾನು ಎಲ್ಲರಿಗೂ ಕಾಣುವಂತೆ ಕೈಬೀಸಿದರೂ ಒಬ್ಬನೇ ಒಬ್ಬ ವ್ಯಕ್ತಿ ಕೂಡ ನನ್ನತ್ತ ತಿರುಗಿ ನೋಡಲಿಲ್ಲ. ಯಾರಿಗೂ ನನ್ನ ಆಟೋಗ್ರಾಫ್ ಬೇಕಿರಲಿಲ್ಲ. ಆ ಕ್ಷಣದಲ್ಲಿ ನನ್ನ ಅಹಂಕಾರ ಚೂರಾಯಿತು. ಲೌಕಿಕ ಜಗತ್ತಿನ ಸ್ಟಾರ್‌ಡಮ್ ಅಧ್ಯಾತ್ಮದ ಎದುರು ಎಷ್ಟು ನಗಣ್ಯ ಎಂಬುದು ಅಂದು ನನಗೆ ಅರ್ಥವಾಯಿತು” ಎಂದು ರಜನಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಸಿನಿಮಾದ ಯಶಸ್ಸು ಮತ್ತು ಹಣ ಕೇವಲ ತಾತ್ಕಾಲಿಕ ಎಂದು ಅಭಿಪ್ರಾಯಪಟ್ಟ ರಜನಿಕಾಂತ್, ಅಧ್ಯಾತ್ಮವು ಮನುಷ್ಯನನ್ನು ಸಾವಿನ ನಂತರವೂ ಜೀವಂತವಾಗಿರಿಸುತ್ತದೆ ಎಂದರು. “ಸಿನಿಮಾದ ಸ್ಟಾರ್‌ಡಮ್ ಇಂದು ಇರುತ್ತದೆ, ನಾಳೆ ಹೋಗುತ್ತದೆ. ಆದರೆ ಆಧ್ಯಾತ್ಮಿಕ ಸ್ಟಾರ್‌ಡಮ್ ಶಾಶ್ವತ. ಅದು ಸಾವಿನ ನಂತರವೂ ಬೆಳೆಯುತ್ತಲೇ ಇರುತ್ತದೆ” ಎಂದು ಹೇಳುವ ಮೂಲಕ ಜೀವನದ ಮೌಲ್ಯಗಳನ್ನು ಸಾರಿದರು.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ರಜನಿಕಾಂತ್ ಅವರ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !