ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ಹೇರಲಾಗಿದ್ದ ನಿಷೇಧವನ್ನು ರದ್ದುಪಡಿಸಿ ಇಂದು ತೀರ್ಪು ಪ್ರಕಟಿಸಿದೆ.
ಮಲಯಾಳಂ ಸುದ್ದಿವಾಹಿನಿ ‘ಮೀಡಿಯಾ ಒನ್’ ಪ್ರಸಾರವನ್ನು ಭದ್ರತಾ ಕಾರಣಗಳಿಗಾಗಿ ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಕೇರಳ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿಹಾಕಿದೆ.
ಜೊತೆಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ನಾಲ್ಕು ವಾರಗಳಲ್ಲಿ ಚಾನೆಲ್ ನವೀಕರಣ ಪರವಾನಗಿ ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ (ಎಂಐಬಿ) ಸೂಚಿಸಿದೆ.
ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮವನ್ನು ನಿಯಂತ್ರಿಸಲು ಸಾಧ್ಯವಿಲ್ಲ . ಸರ್ಕಾರದ ನೀತಿ, ಕಾರ್ಯಗಳ ವಿಚಾರವಾಗಿ ಮೀಡಿಯಾ ಒನ್ ಸುದ್ದಿ ವಾಹಿನಿ ಮಾಡಿರುವ ಟೀಕೆಗಳನ್ನು ರಾಷ್ಟ್ರವಿರೋಧಿ ಎಂದು ಅರ್ಥೈಸಲಾಗುವುದಿಲ್ಲ. ಉತ್ತಮ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಪತ್ರಿಕಾ ವ್ಯವಸ್ಥೆ ಅಗತ್ಯ ಎಂದು ನ್ಯಾಯಾಲಯ ತಿಳಿಸಿದೆ.
2020 ರಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಮತ್ತು ಗಲಭೆಗಳ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದ ಕೆಲವೇ ಚಾನೆಲ್‌ಗಳಲ್ಲಿ ಒಂದಾಗಿರುವ ಮೀಡಿಯಾ ಒನ್‌ನಲ್ಲಿ ಪ್ರಸಾರಕ್ಕೆ ನಿಷೇಧ ಹೇರುವ ನಿರ್ಧಾರವನ್ನು ಸಮರ್ಥಿಸಲು ಯಾವುದೇ ಪುರಾವೆಗಳಿಲ್ಲ. ಸಮರ್ಪಕ ಸಾಕ್ಷ್ಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಭಯೋತ್ಪಾದಕರ ಸಂಪರ್ಕದಲ್ಲಿದ್ದಾರೆ ಎನ್ನುವುದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು ಪ್ರತಿಪಾದಿಸುವುದು ಸರಿಯಲ್ಲ ಎಂದು ಕೋರ್ಟ್ ತಿಳಿಸಿದೆ.
ದೆಹಲಿಯಲ್ಲಿ ನಡೆದಿದ್ದ ಸಂಘರ್ಷದ ಬಗ್ಗೆ ಕೋಮು ಸಾಮರಸ್ಯ ಕೆಡಿಸುವ ವರದಿ ಮಾಡಲಾಗಿದೆ ಎಂದು ಆರೋಪಿಸಿ ಮಲಯಾಳಂ ಸುದ್ದಿ ವಾಹಿನಿಗೆ ಕೇಂದ್ರ ಸರ್ಕಾರ ನಿರ್ಬಂಧವನ್ನು ವಿಧಿಸಿತ್ತು.