‘ಹಮ್ ದೋ, ಹಮಾರೆ ಬಾರಾ’ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಹಮ್ ದೋ, ಹಮಾರೆ ಬಾರಾ’ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಸಿನಿಮಾದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧ ಮಾಡಿ ಎಂದು ಕರ್ನಾಟಕ ಸರಕಾರ ಆದೇಶ ಹೊರಡಿಸಿತ್ತು.

ಇದೀಗ ಸುಪ್ರೀಂ ಕೋರ್ಟ್ ಚಿತ್ರದ ಟೀಸರ್ ಅನ್ನು “ಆಕ್ಷೇಪಾರ್ಹ” ಎಂದು ಕರೆದಿದೆ. ಮಾತ್ರವಲ್ಲ ಸಿನಿಮಾ ಬಿಡುಗಡೆಯನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ಆದೇಶ ನೀಡಿದೆ. ಚಿತ್ರ ಇದೇ ಜೂನ್ 14 ರಂದು ರಿಲೀಸ್‌ ಆಗಬೇಕಿತ್ತು.

ಅರ್ಜಿದಾರರ ಪರ ವಕೀಲ ಫೌಜಿಯಾ ಶಕೀಲ್ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಅರ್ಜಿಯ ಕುರಿತು ತ್ವರಿತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚಿಸಿದೆ.

ನ್ಯಾಯಮೂರ್ತಿ ಮೆಹ್ತಾ ಅವರು ಚಿತ್ರದ ಟ್ರೈಲರ್‌ ಬಗ್ಗೆಯೂ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ‘ಇಂದು ಬೆಳಗ್ಗೆ ನಾವು ಟೀಸರ್‌ ನೋಡಿದ್ದೇವೆ. ಆಕ್ಷೇಪಾರ್ಹವಾಗಿದೆ. ಟೀಸರ್ ಯೂಟ್ಯೂಬ್‌ನಲ್ಲಿ ಲಭ್ಯವಿದೆ’ ಎಂದು ಹೇಳಿದ್ದಾರೆ. ಬಾಂಬೆ ಹೈಕೋರ್ಟ್‌ನಿಂದ ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಪೀಠ ಸೂಚಿಸಿದೆ.

ಸಿನಿಮಾದಲ್ಲಿ ಒಂದಷ್ಟು ದೃಶ್ಯಗಳನ್ನು, ಸಂಭಾಷಣೆಯನ್ನು ತೆಗೆಯಬೇಕು. ಒಬ್ಬ ಮುಸ್ಲಿಂ ಸದಸ್ಯ ಸೇರಿ ಮೂವರು ಇರುವ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯ ಅಭಿಪ್ರಾಯದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಹುದು ಎಂಬುದಾಗಿ ಬಾಂಬೆ ಹೈಕೋರ್ಟ್‌ ಈ ಹಿಂದೆ ತಿಳಿಸಿತ್ತು.

ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಯನ್ನು 15 ದಿನಗಳವರೆಗೆ ನಿಷೇಧಿಸಲಾಗಿತ್ತು. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!